ADVERTISEMENT

ಸೇನಾ ಪಡೆ ಮಾಜಿ ಮುಖ್ಯಸ್ಥ ಸಿಂಗ್, ನಾಲ್ವರು ಸೇನಾ ಅಧಿಕಾರಿಗಳಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 9:10 IST
Last Updated 20 ಜುಲೈ 2012, 9:10 IST

ನವದೆಹಲಿ (ಪಿಟಿಐ): ಸೇನಾಪಡೆಯ ಮಾಜಿ ಮುಖ್ಯಸ್ಥ  ಮತ್ತು ಸೇನಾ ಉಪ ಮುಖ್ಯಸ್ಥ ಸೇರಿದಂತೆ ನಾಲ್ವರು ಸೇನಾ ಅಧಿಕಾರಿಗಳು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಸಂಬಂಧದಲ್ಲಿ ಹೊರಡಿಸಲಾಗಿದ್ದ ಸಮನ್ಸ್ ಅನುಸರಿಸಿ ಶುಕ್ರವಾರ ದೆಹಲಿಯ ನ್ಯಾಯಾಲಯದಲ್ಲಿ ಹಾಜರಾಗಿದ್ದು ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು.

ಸೇನಾ ಪಡೆ ಮಾಜಿ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್, ಸೇನಾ ಉಪ ಮುಖ್ಯಸ್ಥ ಎಸ್,ಕೆ. ಸಿಂಗ್, ಲೆಫ್ಟಿನೆಂಟ್ ಜನರಲ್ ಬಿ.ಎಸ್. ಥಾಕೂರ್ (ಸೇನಾ ಜಾಗೃತಾದಳ ಮಹಾ ನಿರ್ದೇಶಕ), ಮೇಜರ್ ಜನರಲ್ ಎಸ್.ಎಲ್. ನರಸಿಂಹನ್ (ಸಾರ್ವಜನಿಕ ಮಾಹಿತಿ ಇಲಾಖಾ ಅಡಿಷನಲ್ ಡೈರೆಕ್ಟರ್ ಜನರಲ್) ಮತ್ತು ಲೆಫ್ಟಿನೆಂಟ್ ಕರ್ನಲ್ ಹಿಟ್ಟೆನ್ ಸಾವ್ಹಿನಿ ಅವರು ಲೆಫ್ಟಿನೆಂಟ್ ಜನರಲ್ (ನಿವೃತ್ತ) ತೇಜೀಂದರ್ ಸಿಂಗ್ ಅವರು ದಾಖಲಿಸಿದ್ದ ಪಕ್ರರಣ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾದರು.

ಎಲ್ಲ ಐದೂ ಮಂದಿ ಆರೋಪಿಗಳಿಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜೇ ಥರೇಜಾ ಅವರು ತಲಾ 20,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡಿದರು.

ಈ ಆರೋಪಿಗಳು ತಮ್ಮ ಹುದ್ದೆ ಹಾಗೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತಮ್ಮ ವಿರುದ್ಧ ಮಿಥ್ಯಾರೋಪಗಳನ್ನು ಮಾಡಿರುವುದಾಗಿ ತೇಜೀಂದರ್ ಸಿಂಗ್ ಆಪಾದಿಸಿದ್ದರು.

ನ್ಯಾಯಾಧೀಶ ಥರೇಜಾ ಅವರು ತನ್ನ ಮುಂದೆ ಹಾಜರಾಗುವಂತೆ ಜೂನ್ ಎಂಟರಂದು ಆರೋಪಿಗಳಿಗೆ ಆಜ್ಞಾಪಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.