ನವದೆಹಲಿ (ಪಿಟಿಐ): ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಬಿಕ್ರಮ್ ಸಿಂಗ್ ಅವರ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳ ಸಂಪೂರ್ಣ ಕಡತವನ್ನು ಹಾಜರು ಪಡಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಆಜ್ಞಾಪಿಸಿದೆ.
ನ್ಯಾಯಮೂರ್ತಿಗಳಾದ ಆರ್.ಎಂ. ಲೋಧಾ ಮತ್ತು ಎಚ್.ಎಲ್. ಗೋಖಲೆ ಅವರನ್ನು ಒಳಗೊಂಡ ಪೀಠವು ಬಿಕ್ರಮ್ ಸಿಂಗ್ ನೇಮಕಾತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತ ಅರ್ಜಿಯ ವಿಚಾರಣೆ ಕಾಲದಲ್ಲಿ ಇದಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಯನ್ನು ಪರಿಶೀಲಿಸಿಲು ನಿರ್ಧರಿಸಿ, ಕಡತವನ್ನು ಮಧ್ಯಾಹ್ನ 2 ಗಂಟೆಗೆ ತನ್ನ ಮುಂದೆ ಹಾಜರು ಪಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಸೂಕ್ಷ್ಮ ವಿಚಾರವಾದ್ದರಿಂದ ಪ್ರಕರಣದ ವಿಚಾರಣೆಯನ್ನು ರಹಸ್ಯವಾಗಿ ನಡೆಸಬೇಕು, ನ್ಯಾಯಾಲಯದಲ್ಲಿ ಬಹಿರಂಗವಾಗಿ ನಡೆಸಬಾರದು ಎಂಬುದಾಗಿ ಅರ್ಜಿದಾರರು ಮಾಡಿದ ಮನವಿಯನ್ನು ತಿರಸ್ಕರಿಸಿದ ಪೀಠವು ಅರ್ಜಿಯಲ್ಲಿ ಮಾಡಲಾಗಿರುವ ಎಲ್ಲಾ ಆಪಾದನೆಗಳೂ ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವುದರಿಂದ ಎಲ್ಲರಿಗೂ ಸುಪರಿಚಿತವಾಗಿರುವಂತಹುದೇ ಆಗಿದೆ ಎಂದು ಹೇಳಿತು.
ನೌಕಾಪಡೆಯ ಮಾಜಿ ಮುಖ್ಯ ಅಡ್ಮಿರಲ್ ಲಕ್ಷ್ಮೀನಾರಾಯಣ್ ರಾಮದಾಸ್ ಮತ್ತು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ಸೇರಿದಂತೆ ನಿವೃತ್ತ ಅಧಿಕಾರಿಗಳು ಮತ್ತು ಆಡಳಿತಗಾರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪೀಠವು ಆಲಿಸುತ್ತಿದೆ. ಬಿಕ್ರಮ್ ಸಿಂಗ್ ಅವರನ್ನು ಮುಂದಿನ ಸೇನಾ ದಂಡನಾಯಕರಾಗಿ ನೇಮಕ ಮಾಡುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.
ಅರ್ಜಿದಾರರು ಹಾಲಿ ಸೇನಾ ಮುಖ್ಯಸ್ಥರ ವಯಸ್ಸಿಗೆ ಸಂಬಂಧಿಸಿದ ವಿವಾದದ ಬಗ್ಗೆ ಪ್ರಸ್ತಾಪಿಸಿದಾಗ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ವಿವಾದವನ್ನು ಈಗಾಗಲೇ ಇತ್ಯರ್ಥಗೊಳಿಸಲಾಗಿರುವುದರಿಂದ ಅದನ್ನು ಮತ್ತೆ ಆಲಿಸಲಾಗದು ಎಂದು ಪೀಠವು ಸ್ಪಷ್ಟ ಪಡಿಸಿತು.
ವಯಸ್ಸಿನ ವಿವಾದವನ್ನು ಮತ್ತೆ ಕೆದಕುವ ದುರುದ್ದೇಶದೊಂದಿಗೆ ಈ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಹೇಳಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬಲವಾಗಿ ವಿರೋಧಿಸಿದ ಸರ್ಕಾರಿ ಪರ ಉನ್ನತ ವಕೀಲರಾದ ಅಟಾರ್ನಿ ಜನರಲ್ ಜಿ.ಇ. ವಹನ್ವತಿ, ಸಾಲಿಸಿಟರ್ ಜನರಲ್ ರೋಹಿಂಟನ್ ಎಫ್. ನಾರಿಮನ್ ವಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.