ADVERTISEMENT

ಸೇನಾ ಮುಖ್ಯಸ್ಥರ ನೇಮಕ ಪ್ರಕ್ರಿಯೆಗೆ ಚಾಲನೆ

ಲೆ. ಜ. ದಲ್ಬೀರ್‌ ಸಿಂಗ್‌ ಸುಹಾಗ್‌ ಹೆಸರು ಶಿಫಾರಸು

​ಪ್ರಜಾವಾಣಿ ವಾರ್ತೆ
Published 12 ಮೇ 2014, 19:30 IST
Last Updated 12 ಮೇ 2014, 19:30 IST

ನವದೆಹಲಿ (ಪಿಟಿಐ): ನೂತನ ಸೇನಾ ಮುಖ್ಯಸ್ಥರ ನೇಮಕ ಸಂಬಂಧ ಪ್ರಕ್ರಿಯೆ ಆರಂಭಿಸಲು ರಕ್ಷಣಾ ಸಚಿವಾಲಯ ಮುಂದಾಗಿದೆ. ಲೆ.ಜ.ದಲ್ಬೀರ್‌ ಸಿಂಗ್‌ ಸುಹಾಗ್‌ ಅವರನ್ನೇ ಮುಂದಿನ ಸೇನಾ ಮುಖ್ಯಸ್ಥರನ್ನಾಗಿ ನೇಮಿಸಬೇಕು ಎಂದು ರಕ್ಷಣಾ ಸಚಿವಾಲಯ ಈಗಾಗಲೇ ಸಂಪುಟ ನೇಮಕಾತಿ ಸಮಿತಿಗೆ (ಎಸಿಸಿ) ಶಿಫಾರಸು ಮಾಡಿದೆ.

ಚುನಾವಣಾ ನೀತಿ ಸಂಹಿತೆ ಜಾರಿ ಯಲ್ಲಿದ್ದ ಕಾರಣ ಸೇನಾ ಮುಖ್ಯಸ್ಥರ ನೇಮಕ ಪ್ರಕ್ರಿಯೆ ಆರಂಭವಾಗಿರಲಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸೇನಾ ಉಪ ಮುಖ್ಯಸ್ಥರಾಗಿರುವ 59 ವರ್ಷದ  ಸುಹಾಗ್‌,  ಲೆಫ್ಟಿನೆಂಟ್‌ ಜನರಲ್‌ಗಳಲ್ಲೇ ಅತ್ಯಂತ ಹಿರಿಯ­ರಾಗಿದ್ದಾರೆ. ಹಾಗಾಗಿ ಮುಂದಿನ ಸೇನಾ ಮುಖ್ಯಸ್ಥ ಹುದ್ದೆಗೆ ಅವರ ಹೆಸರನ್ನು ಶಿಫಾರಸು ಮಾಡ­ಲಾಗಿದೆ. 

ಏನೇ ಇದ್ದರೂ ಎಸಿಸಿ ಮುಖ್ಯಸ್ಥ ರಾಗಿ­ರುವ ಪ್ರಧಾನಿ ಮನಮೋಹನ್‌ ಸಿಂಗ್‌ ಅವರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ಸೇನಾ ಮುಖ್ಯಸ್ಥ ವಿಕ್ರಂ ಸಿಂಗ್‌ ಜು.31 ರಂದು ನಿವೃತ್ತಿಯಾಗಲಿದ್ದು, ಸಂಪ್ರದಾಯದಂತೆ ನೂತನ ಸೇನಾ ಮುಖ್ಯಸ್ಥರ ಹೆಸರನ್ನು ಎರಡು ತಿಂಗಳು ಮೊದಲೇ  ಘೋಷಣೆ ಮಾಡಬೇಕಿದೆ.

ನೂತನ ಸೇನಾ ಮುಖ್ಯಸ್ಥರ ನೇಮಕ ಬಿಜೆಪಿ ಮತ್ತು ಸರ್ಕಾರದ ನಡುವೆ ತಿಕ್ಕಾಟಕ್ಕೆ ಕಾರಣವಾಗಿತ್ತು.  ನೇಮಕಕ್ಕೆ ಸರ್ಕಾರ ಅವಸರ ಮಾಡುತ್ತಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಸಮಯ­ವಿದೆ ಎಂದು ಬಿಜೆಪಿ ಈ ಹಿಂದೆ  ಹೇಳಿತ್ತು.

ಬಿಜೆಪಿ ಆಕ್ಷೇಪ: ಸೇನಾ ಮುಖ್ಯಸ್ಥರ ನೇಮಕಕ್ಕೆ ಸರ್ಕಾರ ಮುಂದಾಗಿರುವು­ದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಮುಖ ಹುದ್ದೆಗೆ ನೇಮಕ ಮಾಡಲು ಇಷ್ಟು ಅವಸರ ಏಕೆ ಎಂದು ಪ್ರಶ್ನಿಸಿದೆ. ಇದು ಸಾಂವಿಧಾನಿಕ ಔಚಿತ್ಯ ಮತ್ತು ರಾಜಕೀಯ ಪ್ರಾಮಾಣಿಕತೆಗೆ ವಿರುದ್ಧ­ವಾದುದು ಎಂದು ಹೇಳಿದೆ.

ಹೊಸ ಸರ್ಕಾರ ರಚನೆಗೆ 90 ಗಂಟೆಗಳಿಗೆ ಮೊದಲು ವಾಣಿಜ್ಯ ಮತ್ತು ಹಣಕಾಸು ಇಲಾಖೆ ಸೇರಿದಂತೆ ಪ್ರಮುಖ ನೇಮಕದಲ್ಲಿ ಮನ­ಮೋಹನ್ ಸಿಂಗ್ ಸರ್ಕಾರ ಅವ­ಸರ ತೋರು­ತ್ತಿದೆ. ಇದು ಅತಿ­ಯಾದ ಸಂಕಟ  ತಂದಿದೆ ಎಂದು ಬಿಜೆಪಿ ಮುಖಂಡ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.