ADVERTISEMENT

ಸೇನಾ ಮುಖ್ಯಸ್ಥರ ವಿರುದ್ಧ ಮೊಕದ್ದಮೆ ಹಿಂಪಡೆದ ತೇಜಿಂದರ್ ಸಿಂಗ್

​ಪ್ರಜಾವಾಣಿ ವಾರ್ತೆ
Published 10 ಮೇ 2012, 9:05 IST
Last Updated 10 ಮೇ 2012, 9:05 IST
ಸೇನಾ ಮುಖ್ಯಸ್ಥರ ವಿರುದ್ಧ ಮೊಕದ್ದಮೆ ಹಿಂಪಡೆದ ತೇಜಿಂದರ್ ಸಿಂಗ್
ಸೇನಾ ಮುಖ್ಯಸ್ಥರ ವಿರುದ್ಧ ಮೊಕದ್ದಮೆ ಹಿಂಪಡೆದ ತೇಜಿಂದರ್ ಸಿಂಗ್   

ನವ ದೆಹಲಿ (ಪಿಟಿಐ): ಆಶ್ಚರ್ಯಕರ ವಿದ್ಯಮಾನವೊಂದರಲ್ಲಿ ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರ ವಿರುದ್ಧ ಸಿಬಿಐ ತನಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ತೇಜಿಂದರ್ ಸಿಂಗ್ ಅವರು ಗುರುವಾರ ಮೊಕದ್ದಮೆಯನ್ನು ವಾಪಾಸ್ ಪಡೆದಿದ್ದಾರೆ.

ಪಿ.ಸದಾಶಿವಂ ಹಾಗೂ ಜೆ.ಚೆಲಮೇಶ್ವರ್ ಅವರನ್ನೊಳಗೊಂಡು ವಿಭಾಗೀಯ ಪೀಠದ ಮುಂದೆ ಹಿರಿಯ ವಕೀಲ ರಾಜೀವ್ ಧವನ್ ಅವರು ಮೊಕದ್ದಮೆ ಹಿಂಪಡೆಯಲು ಅನುಮತಿ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದರು. ಇದಕ್ಕೆ ಪೀಠವು ಒಪ್ಪಿಗೆ ಸೂಚಿಸಿತು.

ತೇಜಿಂದರ್ ಸಿಂಗ್ ಅವರು ಏಪ್ರಿಲ್ 25ರಂದು ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರು ರಕ್ಷಣಾ ಸಚಿವರ ಕಚೇರಿ ದುರುಪಯೋಗಪಡಿಸಿಕೊಂಡಿದ್ದರ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ಆರೋಪವನ್ನು ಸರ್ಕಾರ ಈ ಹಿಂದೆಯೇ ತಳ್ಳಿಹಾಕಿತ್ತು.

ADVERTISEMENT

ಜನರಲ್ ವಿ.ಕೆ.ಸಿಂಗ್ ಅವರು ತೇಜಿಂದರ್ ಸಿಂಗ್ ಅವರ ವಿರುದ್ಧ 14 ಕೋಟಿ ರೂಪಾಯಿಗಳ ಲಂಚ ನೀಡಲು ಬಂದ ಆರೋಪ ಹೋರಿಸಿದ ಮರುದಿನವೇ ತೇಜಿಂದರ್ ಸಿಂಗ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿ ಈ ವಿಷಯದಲ್ಲಿ ಸಿಬಿಐ ತನಿಖೆಗೆ ಆಗ್ರಹಪಡಿಸಿದ್ದರು. ತೇಜಿಂದರ್ ತಮ್ಮ ದೂರಿನಲ್ಲಿ ಸೇನಾ ಮುಖ್ಯಸ್ಥರಾಗಿದ್ದುಕೊಂಡು ಜನರಲ್ ವಿ.ಕೆ.ಸಿಂಗ್ ಅವರು ರಾಜಕೀಯ ಮುಖಂಡರಂತೆ ಹೇಳಿಕೆ ನೀಡುತ್ತಿರುವುದರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ತಮ್ಮ ಮೊಕದ್ದಮೆಯಲ್ಲಿ ಜನರಲ್ ವಿ.ಕೆ.ಸಿಂಗ್ ಅವರನ್ನೂ ಒಬ್ಬ ಕಕ್ಷೀದಾರರನ್ನಾಗಿ ಮಾಡಿದ್ದರು.

ಜತೆಗೆ ವಿಚಾರಣಾ ನ್ಯಾಯಾಲಯದಲ್ಲಿ ಜನರಲ್ ವಿ.ಕೆ.ಸಿಂಗ್ ಹಾಗೂ ಇತರ ನಾಲ್ವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ತೇಜಿಂದರ್ ಸಿಂಗ್ ಹೂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.