ADVERTISEMENT

ಸೇನೆ ಈಗ ಹೆಚ್ಚು ಶುದ್ಧ: ಜನರಲ್

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ನವದೆಹಲಿ (ಪಿಟಿಐ): `ಹಿಂದೆಂದಿಗಿಂತಲೂ ಇಂದು ಸೇನೆ ಹೆಚ್ಚು ಶುದ್ಧವಾಗಿದೆ~ ಎಂದು ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಗುರುವಾರ ಇಲ್ಲಿ ತಿಳಿಸಿದರು.

2010ರಲ್ಲಿ ಜನರಲ್ ದೀಪಕ್ ಕಪೂರ್ ಅವರಿಂದ ಅಧಿಕಾರ ಸ್ವೀಕರಿಸಿದ ಸಂದರ್ಭ ಮತ್ತು ಈಗಿನ ಸಂದರ್ಭಕ್ಕೂ ಬಹಳ ವ್ಯತ್ಯಾಸವಿದೆ ಎಂದು ಹೇಳಿದರು.

`ಹೌದು. ನಾವು ಸೇನೆಯ ಆಂತರಿಕ ಆರೋಗ್ಯದಲ್ಲಿ ಸುಧಾರಣೆ ತರಲು ಯಶಸ್ಸು ಕಂಡಿದ್ದು, ಹಿಂದೆಂದಿಗಿಂತಲೂ ಈಗ ಬಹಳ ಶುದ್ಧವಾಗಿದೆ~ ಎಂದು ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ADVERTISEMENT

`ಸೇನೆಯಲ್ಲಿ ನಡೆದ ಸುಕ್ನಾ ಭೂಹಗರಣದ ಕುರಿತ ಚರ್ಚೆ ಎಲ್ಲೆಡೆ ವ್ಯಾಪಕವಾಗಿ ಕೇಳಿ ಬರುತ್ತಿದ್ದ ಸಂದರ್ಭದಲ್ಲಿಯೇ ಅಧಿಕಾರ ಸ್ವೀಕರಿಸಿದ ನಾನು ಸೇನೆಯ ಆಂತರಿಕ ಆರೋಗ್ಯ ಸುಧಾರಿಸುವುದಕ್ಕೆ ಮೊದಲ ಆದ್ಯತೆ ನೀಡಿದ್ದೆ~ ಎಂದರು.

ಸೇನೆಯಲ್ಲಿ ಎಲ್ಲವೂ ಸುಗಮವಾಗಿ ನಡೆಯುತ್ತಿದೆ ಎಂದರೆ, ಅಧಿಕಾರಿಗಳು ಮತ್ತು ಸೇನಾ ಸಿಬ್ಬಂದಿ, ಮುಖ್ಯ ಮೌಲ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ ಎಂದರ್ಥ ಎಂದು ಹೇಳಿದರು.

`ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲಾಗಿದೆ. ಸೈನಿಕರು ಯಾವುದೇ ರೀತಿಯ ದುರ್ನಡತೆ ತೋರಿರುವುದು ಕಂಡು ಬಂದಲ್ಲಿ ಸೇನೆಯ ನಿಯಮದಡಿ ಕಠಿಣ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ ಯಾವುದೇ ರೀತಿ ಸಮಸ್ಯೆ ಉದ್ಭವಿಸಲಿಲ್ಲ~ ಎಂದರು.

ಸಿಂಗ್ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ನಂತರ ಭೂಹಗರಣದ ಆರೋಪಕ್ಕೆ ಗುರಿಯಾದ ಮೂವರು ಲೆಫ್ಟಿನೆಂಟ್ ಜನರಲ್ ಮತ್ತು ಆದರ್ಶ ಗೃಹ ನಿರ್ಮಾಣ ಹಗರಣದಲ್ಲಿ ಹೆಸರು ಕೇಳಿ ಬಂದ ಇಬ್ಬರು ಮಾಜಿ ಸೇನಾ ಮುಖ್ಯಸ್ಥರನ್ನು ಕೋರ್ಟ್ ಮಾರ್ಷಲ್‌ಗೆ ಒಳಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.