ADVERTISEMENT

ಸೊಹ್ರಾಬುದ್ದೀನ್ ಎನ್‌ಕೌಂಟರ್: ಪ್ರತಿಕ್ರಿಯೆ ತಿಳಿಸಲು ಸರ್ಕಾರಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 19:30 IST
Last Updated 19 ಜನವರಿ 2011, 19:30 IST

ನವದೆಹಲಿ (ಪಿಟಿಐ): ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆಯನ್ನು ಗುಜರಾತ್‌ನಿಂದ ಹೊರಗೆ ನಡೆಸಬೇಕೆಂಬ ಸಿಬಿಐ ಕೋರಿಕೆ ಬಗ್ಗೆ ತನ್ನ ಪ್ರತಿಕ್ರಿಯೆ ತಿಳಿಸುವಂತೆ ಸುಪ್ರೀಂಕೋರ್ಟ್ ಬುಧವಾರ ಗುಜರಾತ್ ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ಗುಜರಾತ್‌ನ ಮಾಜಿ ಗೃಹ ಸಚಿವ ಅಮಿತ್ ಷಾ ಮತ್ತಿತರ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಗಳಾಗಿರುವ ಈ ಪ್ರಕರಣದ ವಿಚಾರಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯಬೇಕಾದರೆ ಅದನ್ನು ರಾಜ್ಯದಿಂದ ಹೊರಕ್ಕೆ ವರ್ಗಾಯಿಸುವುದು ಸೂಕ್ತ ಎಂದು ಸಿಬಿಐ ಹೇಳಿದೆ.

ವರ್ಗಾವಣೆ ಕೋರಿ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಫ್ತಾಬ್ ಅಲಂ ಮತ್ತು ಆರ್.ಎಂ.ಲೋಧಾ ಅವರನ್ನು ಒಳಗೊಂಡ ನ್ಯಾಯಪೀಠ, ಸರ್ಕಾರ ಹಾಗೂ ಇತರ 19 ಜನರಿಗೆ ನೋಟಿಸ್ ಜಾರಿ ಮಾಡಿ, ಮುಂದಿನ ವಿಚಾರಣೆಯನ್ನು ಜ.27ಕ್ಕೆ ನಿಗದಿ ಮಾಡಿದೆ.

ಈ ಪ್ರಕರಣದ ಕೆಲವು ಆರೋಪಿಗಳ ಸಂಬಂಧಿಗಳು ಪ್ರಾಸಿಕ್ಯೂಟರ್‌ಗಳಾಗಿದ್ದರೆ ಮತ್ತೆ ಕೆಲವರು ಅಧೀನ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರೂ ಆಗಿದ್ದಾರೆ ಎಂಬುದನ್ನು ಸಿಬಿಐ ನ್ಯಾಯಾಲಯದ ಗಮನಕ್ಕೆ ತಂದಿದೆ.

ಗುಜರಾತ್‌ನ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಷಾ ಮತ್ತು ಮಾಜಿ ಪೊಲೀಸ್ ಅಧಿಕಾರಿಗಳ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದುದರಿಂದ ನ್ಯಾಯಾಲಯದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿ ಅಪಹರಿಸಿದ ಘಟನೆಗಳೂ ಈ ಹಿಂದೆ ನಡೆದಿವೆ ಎಂಬುದನ್ನು ಸಿಬಿಐ ಗಮನಕ್ಕೆ ತಂದಿದೆ.

ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿರುವ ಈ ಪ್ರಕರಣದಲ್ಲಿ ನಿಜವಾದ ತಪ್ಪಿತಸ್ಥರನ್ನು ಪಾರು ಮಾಡುವುದಕ್ಕಾಗಿ ಹಲವಾರು ರೀತಿಯ ಒತ್ತಡಗಳನ್ನು ಹೇರಲಾಗುತ್ತಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಗುಜರಾತ್‌ನಿಂದ ಹೊರಕ್ಕೆ ವರ್ಗಾಯಿಸಬೇಕು ಎಂದು ಸಿಬಿಐ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.