ADVERTISEMENT

ಸೋನಿಯಾಗೆ ಮೋದಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಅಹಮದಾಬಾದ್ (ಪಿಟಿಐ): `ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನನ್ನ ವಿರುದ್ಧ ಜನರನ್ನು ಎತ್ತಿಕಟ್ಟುವ ಹುನ್ನಾರ ಮಾಡುತ್ತಿದ್ದಾರೆ. ನಾನೇನಾದರೂ ತಪ್ಪು ಮಾಡಿದಲ್ಲಿ ಕೇಂದ್ರವು ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಿ' ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಶನಿವಾರ ಸವಾಲು ಹಾಕಿದ್ದಾರೆ.
ಸೋನಿಯಾ ತಮ್ಮ ಹೇಳಿಕೆಗೆ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.

`2007ರಲ್ಲಿ ಸೋನಿಯಾ ನನ್ನನ್ನು `ಸಾವಿನ ವ್ಯಾಪಾರಿ' ಎಂದು ಕರೆದಿದ್ದರು. ಆದರೆ ಜನರು ನಮ್ಮನ್ನು ಗೆಲ್ಲಿಸಿದ್ದರು. ಈ ಬಾರಿ ನನ್ನನ್ನು `ಮೋಸಗಾರ' ಎಂದಿದ್ದಾರೆ. ಜನರು ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ನಾಮಾವಶೇಷ ಮಾಡಲಿದ್ದಾರೆ' ಎಂದು ಗುಡುಗಿದ್ದಾರೆ.

ದಕ್ಷಿಣ ಗುಜರಾತ್‌ನಲ್ಲಿ ಚುನಾವಣಾ ರ‌್ಯಾಲಿಯನ್ನುದ್ದೇಶಿ ಮಾತನಾಡಿದ ಮೋದಿ, `ಮೇಡಂ ನೀವು ಇಲ್ಲಿನ ಜನರನ್ನು ನನ್ನ ವಿರುದ್ಧ ಎತ್ತಿ ಕಟ್ಟುತ್ತಿದ್ದೀರಿ. ಅಲ್ಲದೇ ಮುಖ್ಯಮಂತ್ರಿಯನ್ನು `ಮೋಸಗಾರ' ಎಂದು ಕರೆಯುವ ಮೂಲಕ ರಾಜ್ಯದ ಜನರನ್ನು ಅವಮಾನಿಸಲು ಯತ್ನಿಸಿದ್ದೀರಿ' ಎಂದು ಸೋನಿಯಾ ವಿರುದ್ಧ ವಾಗ್ದಾಳಿ ನಡೆಸಿದರು.

ಪೊಳ್ಳು ಭರವಸೆ: `ಮುಂದಿನ ಐದು ವರ್ಷಗಳಲ್ಲಿ ಬಡವರಿಗೆ ಕಡಿಮೆ ವೆಚ್ಚದ 50 ಲಕ್ಷ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಮೋದಿ ಕೊಟ್ಟಿರುವ ಭರವಸೆಯು ಜನರನ್ನು ದಿಕ್ಕು ತಪ್ಪಿಸುವಂತಿದೆ' ಎಂದು ಕೇಂದ್ರ ಸಚಿವ ಅಜಯ್ ಮಾಕನ್ ಲೇವಡಿ ಮಾಡಿದ್ದಾರೆ.
ಮೋದಿಗೆ ಬೆಂಬಲ: `ಪ್ರಧಾನಿಯಾಗುವ ಎಲ್ಲ ಅರ್ಹತೆಗಳು ಮೋದಿ ಅವರಿಗೆ ಇವೆ' ಎಂದು ಬಿಜೆಪಿ ಮುಖಂಡ ಅಮಿತ್ ಷಾ ಹೇಳಿದ್ದಾರೆ.

ರಾಜ್‌ಕೋಟ್ ವರದಿ: `ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅರ್ಜುನ್ ಮೊಧ್ವದಿಯಾ, ಪ್ರತಿಪಕ್ಷ ನಾಯಕ ಶಕ್ತಿ ಸಿಂಗ್ ಗೊಹಿಲ್ ಹಾಗೂ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಶಂಕರ ಸಿಂಗ್ ವಘೇಲಾ ಮುಖ್ಯಮಂತ್ರಿಯಾಗಲು ಪೈಪೋಟಿ ನಡೆಸುತ್ತಿದ್ದಾರೆ. ಅಲ್ಲದೇ ಟಿಕೆಟ್ ಹಂಚಿಕೆಯಲ್ಲಿ ಪಕ್ಷದ ನಿಯಮವನ್ನು ಗಾಳಿಗೆ ತೂರಿದ್ದಾರೆ' ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಉಪಮುಖ್ಯಮಂತ್ರಿ ನರಹರಿ ಅಮಿನ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.