ADVERTISEMENT

ಸೋಮವಾರ ಮೇಲ್ಮನವಿ ವಿಚಾರಣೆಗೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ನವದೆಹಲಿ: ತಮಿಳುನಾಡಿಗೆ 9 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂಬ ಪ್ರಧಾನಿ ನೇತೃತ್ವದ `ಕಾವೇರಿ ನದಿ ಪ್ರಾಧಿಕಾರ~ದ (ಸಿಆರ್‌ಎ) ನಿರ್ದೇಶನ ಪಾಲಿಸಬೇಕೆಂದು ನೀಡಿರುವ ಆದೇಶ  ಪುನರ್ ಪರಿಶೀಲಿಸುವಂತೆ ಮನವಿ ಮಾಡಿ ಕರ್ನಾಟಕ ಗುರುವಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅ. 8ರಂದು ಸೋಮವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ.

ಕರ್ನಾಟಕದ ಮೇಲ್ಮನವಿ ಅರ್ಜಿಯನ್ನು ಸೋಮವಾರ ವಿಚಾರಣೆಗೆ ಎತ್ತಿಕೊಳ್ಳುವುದಾಗಿ ನ್ಯಾ. ಡಿ.ಕೆ. ಜೈನ್ ಹಾಗೂ ನ್ಯಾ. ಮದನ್ ಬಿ. ಲೋಕೂರ್ ಅವರನ್ನೊಳಗೊಂಡ ನ್ಯಾಯಪೀಠ ಶುಕ್ರವಾರ ಹೇಳಿತು.

ರಾಜ್ಯದ ಪರ ಹಾಜರಾದ ಹಿರಿಯ ವಕೀಲ ಶರತ್ ಜವಳಿ, ನ್ಯಾಯಾಲಯದ ಆದೇಶ ಹೊರಬಂದು ವಾರ ಕಳೆದಿದೆ. ಸೆ. 28ರ ಆದೇಶವನ್ನು ರಾಜ್ಯ ಸರ್ಕಾರ ಪಾಲನೆ ಮಾಡಿದೆ.

ಕಾವೇರಿ ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಮೇಲ್ಮನವಿ ಅರ್ಜಿಯನ್ನು ತ್ವರಿತವಾಗಿ ವಿಚಾರಣೆಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು.

ನಿರ್ದೇಶನ: ವಕೀಲರ ವಾದ ಕೇಳಿದ ನ್ಯಾಯಪೀಠ, `ಕರ್ನಾಟಕದ ಅರ್ಜಿ ನ್ಯಾಯಾಲಯದ ವಿಷಯ ಪಟ್ಟಿಯಲ್ಲಿ ಪ್ರಸ್ತಾಪವಾಗಲಿ~ ಎಂದು ಹೇಳಿತು. ಸೋಮವಾರ ತುರ್ತು ವಿಷಯಗಳ ಪ್ರಸ್ತಾಪ ಪಟ್ಟಿಯನ್ನು ರಿಜಿಸ್ಟ್ರಿ ಸಿದ್ಧಪಡಿಸುವುದಿಲ್ಲ ಎಂಬ ಸಂಗತಿಯನ್ನು ಜವಳಿ ನ್ಯಾಯಾಲಯದ ಗಮನಕ್ಕೆ ತಂದರು. `ಸೋಮವಾರದ ವಿಷಯ ಪಟ್ಟಿಯಲ್ಲಿ ಇದನ್ನು ಪ್ರಸ್ತಾಪಿಸಲು ನಾವು ನಿರ್ದೇಶಿಸುತ್ತಿದ್ದೇವೆ~ ಎಂದು ನ್ಯಾಯಮೂರ್ತಿಗಳು ಹೇಳಿದರು.

ತಮಿಳುನಾಡಿಗೆ ಸೆ. 20ರಿಂದ ಅ.15ರವರೆಗೆ 9000 ಕ್ಯೂಸೆಕ್ ನೀರು ಬಿಡಬೇಕೆಂಬ ಪ್ರಧಾನಿ ನೇತೃತ್ವದ `ಕಾವೇರಿ ನದಿ ಪ್ರಾಧಿಕಾರ~ (ಸಿಆರ್‌ಎ) ದ ನಿರ್ದೇಶನ ಪಾಲಿಸುವಂತೆ ನೀಡಿರುವ ಆದೇಶವನ್ನು ತಡೆ ಹಿಡಿಯಬೇಕು ಇಲ್ಲವೆ ಮಾರ್ಪಾಡು ಮಾಡಬೇಕೆಂದು ಮನವಿ ಮಾಡಿದೆ.

ಸಿಆರ್‌ಎ ನಿರ್ದೇಶನ ವಸ್ತುಸ್ಥಿತಿ ಆಧರಿಸಿಲ್ಲ. ಮಳೆ- ಬಿತ್ತನೆ ಸಂಬಂಧಿಸಿದ ಅಂಕಿಸಂಖ್ಯೆಗಳು ಸಮರ್ಪಕವಾಗಿಲ್ಲ. ಪ್ರಾಧಿಕಾರ ತನ್ನ ತೀರ್ಮಾನ ಪ್ರಕಟಿಸುವ ಮುನ್ನ ಪರಿಣತರ ತಂಡ ಕಳುಹಿಸಿ ವಾಸ್ತವ ಸ್ಥಿತಿಗತಿ ವರದಿ ಪಡೆದಿಲ್ಲ.

1996 ಮತ್ತು 2002ರಲ್ಲಿ ಇಂಥ ಪರಿಸ್ಥಿತಿ ಉದ್ಭವಿಸಿದ್ದಾಗ ಕೇಂದ್ರ ತಂಡ ಕಳುಹಿಸಲಾಗಿತ್ತು. ಆದರೆ, ಈ ಸಲ ರಾಜ್ಯದ ಗಂಭೀರ ಪರಿಸ್ಥಿತಿ ಗಮನಕ್ಕೆ ತೆಗೆದುಕೊಳ್ಳದೆ ನಿರ್ದೇಶನ ನೀಡಲಾಗಿದೆ ಎಂದು ಆರೋಪಿಸಿದೆ.

ಈ ಮಧ್ಯೆ, ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ಜಲಾಶಯಗಳ ನೀರಿನ ಸಂಗ್ರಹ ಹಾಗೂ ಬೆಳೆ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲು ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಡಿ.ವಿ. ಸಿಂಗ್ ನೇತೃತ್ವದ ತಂಡ ತೆರಳಿರುವ ಹಿನ್ನೆಲೆಯಲ್ಲಿ ಈ ತಿಂಗಳ ಎಂಟರಂದು ನಡೆಸಲು ಉದ್ದೇಶಿಸಲಾಗಿದ್ದ `ಕಾವೇರಿ ಉಸ್ತುವಾರಿ ಸಮಿತಿ~ (ಸಿಎಂಸಿ) ಸಭೆಯನ್ನು ಸೋಮವಾರ ಅ.11ಕ್ಕೆ ಮುಂದೂಡಲಾಗಿದೆ.

ಕಾವೇರಿ ನದಿ ಪ್ರಾಧಿಕಾರ ಸೆ. 20ರಿಂದ ಅ. 15ರವರೆಗೆ ಪ್ರತಿದಿನ 9ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. 15ರ ಬಳಿಕ ಬಿಡಬೇಕಾದ ನೀರಿನ ಪ್ರಮಾಣ ಕುರಿತು ತೀರ್ಮಾನಿಸುವ ಅಧಿಕಾರವನ್ನು ಜಲ ಸಂಪನ್ಮೂಲ ಕಾರ್ಯದರ್ಶಿ ನೇತೃತ್ವದ `ಸಿಎಂಸಿ~ ಗೆ ನೀಡಲಾಗಿದೆ. ಈ ಸಮಿತಿ `ಸಿಆರ್‌ಎ~ ಅಗತ್ಯ ಶಿಫಾರಸು ಮಾಡಲಿದೆ. ಅಂತಿಮ ತೀರ್ಮಾನ ಕೈಗೊಳ್ಳಲು ಸಿಆರ್‌ಎ ಪುನಃ ಸೇರಬಹುದು ಅಥವಾ ಪ್ರಧಾನಿ ನೇರವಾಗಿ ನಿರ್ಧಾರ ಪ್ರಕಟಿಸಬಹುದು.

ಡಿ.ವಿ.ಸಿಂಗ್ ನೇತೃತ್ವದ ತಂಡ ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಸಿಎಂಸಿ ಸಭೆಯನ್ನು ಮುಂದೂಡಲಾಗಿದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಕೇಂದ್ರ ತಂಡ ಪರಿಶೀಲನೆ: ಅಕ್ಟೋಬರ್ 1ರಿಂದ ಬರುವ ವರ್ಷ ಜನವರಿ 31ರವರೆಗೆ ತಮಿಳುನಾಡಿಗೆ ದೊರೆಯಬಹುದಾದ 120 ಟಿಎಂಸಿ ನೀರು ಕುರಿತು ಕರ್ನಾಟಕ ಪ್ರತಿಪಾದಿಸುತ್ತಿದೆ. 

ಮೆಟ್ಟೂರು ಅಣೆಕಟ್ಟೆಯ  ಸಂಗ್ರಹ 37 ಟಿಎಂಸಿ, ಬಿಳಿಗುಂಡ್ಲುವಿನಿಂದ ಬಿಡುಗಡೆ ಆಗಲಿರುವ 38 ಟಿಎಂಸಿ, ಬಿಳಿಗುಂಡ್ಲು- ಮೆಟ್ಟೂರು ನಡುವಿನ ನೀರು ಐದು ಟಿಎಂಸಿ ಹಾಗೂ ಈಶಾನ್ಯ ಮಾರುತದಿಂದ 40 ಟಿಎಂಸಿ ಲಭ್ಯವಿದೆ ಎಂದು ಕರ್ನಾಟಕ ಹೇಳುತ್ತಿದೆ.

ರಾಜ್ಯದ ಈ ವಾದವನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ರಾಜ್ಯದ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರ ಜತೆ ಕೇಂದ್ರ ಸರ್ಕಾರ ಸಮಾಲೋಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.