ADVERTISEMENT

ಸ್ಫೋಟದಿಂದ ಸರ್ಕಾರಕ್ಕೆ ಕಪ್ಪುಚುಕ್ಕೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 19:00 IST
Last Updated 15 ಸೆಪ್ಟೆಂಬರ್ 2011, 19:00 IST
ಸ್ಫೋಟದಿಂದ ಸರ್ಕಾರಕ್ಕೆ ಕಪ್ಪುಚುಕ್ಕೆ
ಸ್ಫೋಟದಿಂದ ಸರ್ಕಾರಕ್ಕೆ ಕಪ್ಪುಚುಕ್ಕೆ   

ನವದೆಹಲಿ (ಪಿಟಿಐ): ಇತ್ತೀಚೆಗೆ ಮುಂಬೈ ಮತ್ತು ದೆಹಲಿಯಲ್ಲಿ ನಡೆದ ಎರಡು ಬಾಂಬ್ ಸ್ಫೋಟ ಪ್ರಕರಣಗಳು ಸರ್ಕಾರದ ದಾಖಲೆಯಲ್ಲಿ ಒಂದು `ಕಪ್ಪು ಚುಕ್ಕೆ~ಯಾಗಿದೆ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ನುಡಿದರು.

ಅವರು ಗುರುವಾರ ಇಲ್ಲಿ ಕೇಂದ್ರ ಗುಪ್ತಚರದಳ ಏರ್ಪಡಿಸಿದ್ದ ಡಿಜಿಪಿಗಳು, ಐಜಿಪಿಗಳು ಹಾಗೂ ಇತರ ಉನ್ನತ ಪೊಲೀಸ್ ಅಧಿಕಾರಿಗಳ ಮೂರು ದಿನಗಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

`ಮನೆಯಲ್ಲೇ ಕುಳಿತು ಸಂಚು ರೂಪಿಸುವ ಉಗ್ರರು ಈಗ ಸಕ್ರಿಯವಾಗಿದ್ದು, ಇಂತಹ ಸಂಘಟನೆಗಳು ಬಾಂಬ್‌ಗಳನ್ನು ತಯಾರಿಸುವ ಸಾಮರ್ಥ್ಯವನ್ನೂ ಪಡೆದಿವೆ. ಜತೆಗೆ ದೇಶದ ಯುವಕರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುತ್ತಿವೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ~ ಎಂದು ಆತಂಕ ವ್ಯಕ್ತಪಡಿಸಿದರು.

`ಇವುಗಳಲ್ಲಿ ಇಂಡಿಯನ್ ಮುಜಾಹಿದೀನ್ (ಐಎಂ) ಮತ್ತು ನಿಷೇಧಿತ ಭಾರತೀಯ ವಿದಾರ್ಥಿಗಳ ಇಸ್ಲಾಮಿಕ್ ಚಳವಳಿ (ಸಿಮಿ)ಯ ಅನೇಕ ಹಳೆಯ ಬಣಗಳು ಒಟ್ಟಾಗಿ `ಐಎಂ~ ಹೆಸರಿನ ಒಂದು ಸಂಘಟನೆಯಾಗಿ ಜಾಲ ಹೆಣೆದುಕೊಂಡಿವೆ~ ಎಂದರು.

`ಭಾರತದ ಬಲಪಂಥೀಯ ಧಾರ್ಮಿಕ ಮೂಲಭೂತವಾದ ಅಥವಾ ಪ್ರತ್ಯೇಕತಾವಾದದ ಹೋರಾಟವನ್ನು ಕೆಲವು ಸಂಘಟನೆಗಳು ಬೆಂಬಲಿಸುತ್ತಿವೆ~ ಎಂದು ಹೇಳಿದರು.

ಜುಲೈ 13ರಂದು ಮುಂಬೈನಲ್ಲಿ ಮತ್ತು ಸೆಪ್ಟೆಂಬರ್ 7ರಂದು ದೆಹಲಿಯಲ್ಲಿ ನಡೆದ ಸ್ಫೋಟಗಳನ್ನು ಪ್ರಸ್ತಾಪಿಸಿದ ಅವರು, `ಕೇವಲ ಎರಡು ತಿಂಗಳ ಅವಧಿಯಲ್ಲಿ ಎರಡು ಭಯೋತ್ಪಾದಕ ದಾಳಿಗಳು ನಡೆದಿರುವುದು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದೆ~ ಎಂದರು.

ಈ ದಾಳಿಗಳ ಹಿನ್ನೆಲೆಯಲ್ಲಿ ಸಹಜವಾಗಿ ಕೇಂದ್ರ ಸರ್ಕಾರ ಮತ್ತು ಭದ್ರತಾ ಪಡೆಗಳ ವಿರುದ್ಧ ಸಾರ್ವತ್ರಿಕವಾಗಿ ತೀವ್ರ ಟೀಕೆಗಳು ವ್ಯಕ್ತವಾಗಿದ್ದು, ಇದರ ಹೊಣೆಗಾರಿಕೆ ಮತ್ತು ಆರೋಪವನ್ನು ನಾವು ಹೊರಲೇಬೇಕಾಗಿದೆ. ಇಂತಹ ಉಗ್ರರ ದಾಳಿಗಳು ನಡೆದ ಸಂದರ್ಭದಲ್ಲಿ ನಮ್ಮ ಕರ್ತವ್ಯವನ್ನು ನಿಭಾಯಿಸಲು ನಾವು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದು ಸೂಚಿಸಿದರು.

`ಅಮೆರಿಕ ಸೇರಿದಂತೆ ವಿಶ್ವದ ಯಾವುದೇ ರಾಷ್ಟ್ರವೂ ಭಯೋತ್ಪಾದನೆಯ ಬೆದರಿಕೆಯಿಂದ ಸಂಪೂರ್ಣ ಮುಕ್ತವಾಗಿಲ್ಲ. ಇದಕ್ಕೆ ಹೆಚ್ಚು ಬಲಿಯಾಗಿರುವುದು ಇರಾಕ್, ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ. ಈ ಭಯೋತ್ಪಾದನೆಯ ಕೇಂದ್ರ ಬಿಂದುವೇ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಪ್ರಾಂತ್ಯವಾಗಿದೆ~ ಎಂದು ಅವರು ಹೇಳಿದರು.

`ಐದು ಪ್ರಮುಖ ಭಯೋತ್ಪಾದನಾ ಸಂಘಟನೆಗಳಲ್ಲಿ ನಾಲ್ಕು ಪಾಕ್‌ನಲ್ಲಿ ನೆಲೆ ಹೊಂದಿವೆ. ಇವುಗಳಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ), ಜೈಷ್-ಎ-ಮೊಹಮ್ಮದ್ (ಜೆಇಎಂ) ಹಾಗೂ ಹಿಜ್ಬುಲ್ ಮುಜಾಹಿದೀನ್ (ಎಚ್‌ಎಂ) ಸಂಘಟನೆಗಳು ಭಾರತವನ್ನು ಗುರಿಯಾಗಿಸಿಕೊಂಡಿರುವುದನ್ನು ಮುಂದುವರಿಸಿವೆ~ ಎಂದರು.

ದೇಶದಾದ್ಯಂತ ಭದ್ರತಾ ಸಂಸ್ಥೆಗಳು 2000ರಿಂದ ತನಿಖೆ ನಡೆಸಿರುವ 48 ಭಯೋತ್ಪಾದನಾ ಪ್ರಕರಣಗಳಲ್ಲಿ 11 ಮಾತ್ರ ಬಗೆಹರಿಯದೆ ಉಳಿದಿದ್ದು, 37ರಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಇವುಗಳಲ್ಲಿ ಎಂಟು ಪ್ರಕರಣಗಳು ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ದೆಹಲಿ, ಕೋಲ್ಕತ್ತ, ಮುಂಬೈ, ಚಂಡೀಗಡ ಮುಂತಾದ ಕೋರ್ಟ್‌ಗಳಲ್ಲಿ ಪೂರ್ಣಗೊಂಡಿದ್ದು, ಆರೋಪಿಗಳಿಗೆ ಶಿಕ್ಷೆಯಾಗಿದೆ. ಕೆಲವು ಪ್ರಕರಣಗಳನ್ನು ಹೆಚ್ಚಿನ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೈಗೆತ್ತಿಕೊಂಡಿದೆ ಎಂದರು.

ಎನ್‌ಸಿಟಿಸಿ ಸ್ಥಾಪನೆ: ಸಲಹೆ
ನವದೆಹಲಿ: ದೇಶದಲ್ಲಿ ಉಗ್ರಗಾಮಿ ಸಂಘಟನೆಗಳನ್ನು ಮಣಿಸಲು, ನಾಶಪಡಿಸಲು ಹಾಗೂ ಮೂಲೋತ್ಪಾಟನೆ ಮಾಡಲು ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್‌ಸಿಟಿಸಿ) ಸ್ಥಾಪಿಸುವ ಅವಶ್ಯಕತೆ ಇರುವುದನ್ನು ಗೃಹ ಸಚಿವ ಪಿ. ಚಿದಂಬರಂ ಪ್ರತಿಪಾದಿಸಿದರು.

ಗುರುವಾರ ಇಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಎನ್‌ಸಿಟಿಸಿಗೆ ಒಪ್ಪಿಗೆ ನೀಡಿದ 60 ದಿನಗಳ ಒಳಗಾಗಿ ಅದು ಜಾರಿಗೆ ಬರಲಿದ್ದು, 18 ತಿಂಗಳಲ್ಲಿ ಕಾರ್ಯಾರಂಭವನ್ನೂ ಮಾಡುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.