ADVERTISEMENT

ಸ್ಫೋಟ: ಚೆನ್ನೈನಲ್ಲಿ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 20:06 IST
Last Updated 23 ಏಪ್ರಿಲ್ 2013, 20:06 IST

ಚೆನ್ನೈ/ಬೆಂಗಳೂರು (ಪಿಟಿಐ): ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿ ಸಮೀಪ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತ ಆರೋಪಿಗಳನ್ನು ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರಲಾಗಿದೆ ಎಂದು ಪೊಲೀಸ್ ಕಮೀಷನರ್ ರಾಘವೇಂದ್ರ ಔರಾದಕರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

1998ರ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟದ ಆರೋಪಿ, ನಿಷೇಧಿತ ಅಲ್-ಉಮ್ಮಾ ಸಂಘಟನೆಯ ಕಾರ್ಯಕರ್ತ 36 ವರ್ಷದ ಕಿಚನ್ ಬುಹಾರಿ(38), ಪೀರ್ ಮೊಹಿದ್ದೀನ್(39) ಹಾಗೂ ಬಷೀರ್(30) ಬಂಧಿತರು.

ಇವರಲ್ಲಿ ಬುಹಾರಿ ಮಧುರೆಯಲ್ಲಿ ಸೆರೆ ಸಿಕ್ಕ. ಇನ್ನಿಬ್ಬರನ್ನು ಸೋಮವಾರ ರಾತ್ರಿ ಚೆನ್ನೈ ಹೂವಿನ ಮಾರುಕಟ್ಟೆಯಲ್ಲಿ ಬಂಧಿಸಲಾಯಿತು. ಇವರೆಲ್ಲ ತಿರುನಲ್ವೇಲಿಗೆ ಸೇರಿದವರು ಎಂದು ಮೂಲಗಳು ತಿಳಿಸಿವೆ.

ಈ ಮೂವರ ಬಂಧನಕ್ಕೂ ಮುನ್ನ ಕರ್ನಾಟಕ ಪೊಲೀಸರು - ತಮಿಳುನಾಡು ಅಪರಾಧ ವಿಭಾಗ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಯ ನೆರವಿನೊಂದಿಗೆ ರಸೂಲ್ ಮೊಹಿದ್ದೀನ್ ಹಾಗೂ ಸಲೀಂ ಎಂಬುವವರನ್ನು ವಶಕ್ಕೆ ತೆಗೆದುಕೊಂಡು, ವಿಚಾರಣೆ ನಡೆಸಿ ಕೆಲ ಮಹತ್ವದ ಮಾಹಿತಿ ಕಲೆ ಹಾಕಿದ್ದರು.

ತಿರುನೆಲ್ವೇಲಿಯ ಉಪನಗರ 1990ರಲ್ಲಿ ಇಸ್ಲಾಮಿಕ್ ಉಗ್ರವಾದಿಗಳ ಅಡಗುತಾಣವಾಗಿತ್ತು. ಬೆಂಗಳೂರು ಸ್ಫೋಟದ ಮೂಲಕ ಈಗ ಮತ್ತೆ ಸುದ್ದಿಯಲ್ಲಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ಪೀರ್ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬುಹಾರಿ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದ. ತಿರುನಲ್ವೇಲಿಯಲ್ಲಿ ಕಟ್ಟಡ ನಿರ್ಮಾಣ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಚೆನ್ನೈನ ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ. 

ಈತ 1998ರ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟದ ಆರೋಪಿ. ಆ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಯಾಗಿತ್ತು. ಇದಲ್ಲದೇ ಮೂರು ಕೊಲೆ ಪ್ರಕರಣಗಳಲ್ಲಿ ಇವನಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಆದರೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಎರಡು ವರ್ಷಗಳ ಹಿಂದಷ್ಟೇ ಆತ ಜೈಲಿನಿಂದ ಬಿಡುಗಡೆಗೊಂಡಿದ್ದ. ಬೆಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕೇರಳದಲ್ಲಿ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.