ADVERTISEMENT

ಸ್ವದೇಶಕ್ಕೆ ಮರಳಿದ ಬ್ರಾರ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:30 IST
Last Updated 3 ಅಕ್ಟೋಬರ್ 2012, 19:30 IST
ಸ್ವದೇಶಕ್ಕೆ ಮರಳಿದ ಬ್ರಾರ್
ಸ್ವದೇಶಕ್ಕೆ ಮರಳಿದ ಬ್ರಾರ್   

ಮುಂಬೈ (ಪಿಟಿಐ): ಲಂಡನ್‌ನಲ್ಲಿ ಈಚೆಗೆ ಅಪರಿಚಿತರಿಂದ ದಾಳಿಗೊಳಗಾಗಿ ಗಾಯಗೊಂಡಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಎಸ್. ಬ್ರಾರ್ ಬುಧವಾರ ಪತ್ನಿ ಮೀನಾ ಅವರೊಂದಿಗೆ ಬಿಗಿ ಭದ್ರತೆಯಲ್ಲಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಬ್ರಾರ್ ಅವರನ್ನು ಹಿರಿಯ ರಕ್ಷಣಾ ಅಧಿಕಾರಿಗಳು ಬರಮಾಡಿಕೊಂಡರು.

`ಮರಳಿ ತಾಯ್ನಾಡಿಗೆ ಬಂದಿರುವುದಕ್ಕೆ ಸಂತೋಷವಾಗಿದೆ. ನಮ್ಮ ಬಗ್ಗೆ ಅತೀವ ಕಾಳಜಿ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದ~ ಎಂದು ಮೀನಾ ತಿಳಿಸಿದರು.

`ನಿಮ್ಮ ಪತಿಗೆ ಜೀವ ಬೆದರಿಕೆ ಜಾಸ್ತಿ ಇದೆ ಎಂದು ಭಾವಿಸುವಿರಾ ಮತ್ತು ಹೆಚ್ಚಿನ ಭದ್ರತೆಯ ಅಗತ್ಯ ಇದೆಯಾ~ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, `ಇಲ್ಲ~ ಎಂದು ಚುಟುಕಾಗಿ ಉತ್ತರಿಸಿದರು. `ಬೆದರಿಕೆ ಯಾವಾಗಲೂ ಇದ್ದೇ ಇರುತ್ತದೆ ಮತ್ತು ಮುಂದೆಯೂಇರುತ್ತದೆ~ ಎಂದರು.

ಅಮೃತಸರದ ಸ್ವರ್ಣ ಮಂದಿರದಲ್ಲಿ 1984ರಲ್ಲಿ ನಡೆದ `ಆಪರೇಷನ್ ಬ್ಲೂಸ್ಟಾರ್~ ಕಾರ್ಯಾಚರಣೆಯಲ್ಲಿ ತಾವು ಪಾತ್ರ ವಹಿಸಿದ್ದಕ್ಕಾಗಿ ಖಲಿಸ್ತಾನ್ ಪರ ಶಕ್ತಿಗಳು ತಮ್ಮನ್ನು ಹತ್ಯೆ ಮಾಡಲು ಯತ್ನಿಸಿವೆ ಎಂದು 78 ವರ್ಷದ ಬ್ರಾರ್ ಅವರು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದರು.

ಘಟನೆಯನ್ನು ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ ತೀವ್ರವಾಗಿ ಖಂಡಿಸಿದ್ದಾರೆ. ಬ್ರಾರ್ ಅವರಿಗೆ ಭದ್ರತೆ ಒದಗಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದಿದ್ದಾರೆ.

`ಬಾದಲ್ ಮೌನ-ರಾಷ್ಟ್ರದ್ರೋಹ~
ಬ್ರಾರ್ ಮೇಲೆ ನಡೆದ ಹಲ್ಲೆ ಕುರಿತು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮೌನ ವಹಿಸಿರುವುದು `ರಾಷ್ಟ್ರದ್ರೋಹ~ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ಆರೋಪಿಸಿದ್ದಾರೆ.

`ವಿಶೇಷ ಭದ್ರತೆಗೆ  ಕೇಂದ್ರ ಸರ್ಕಾರ ಸಿದ್ಧ~
ವಿಜಾಪುರ: `ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಎಸ್. ಬ್ರಾರ್ ಅವರ ಮೇಲೆ ನಡೆದ ದಾಳಿ ದುರದೃಷ್ಟಕರ. ನಿವೃತ್ತ ಹಾಗೂ ಹಾಲಿ ಸೇನಾ ಅಧಿಕಾರಿಗಳಿಗೆ ಜೀವ ಬೆದರಿಕೆ ಇದ್ದರೆ ಅವರಿಗೆ ವಿಶೇಷ ಭದ್ರತೆ ನೀಡಲು ಕೇಂದ್ರ ಸರ್ಕಾರ ಸದಾ ಸಿದ್ಧ~ ಎಂದು ರಕ್ಷಣಾ ಖಾತೆಯ ರಾಜ್ಯ ಸಚಿವ ಎಂ.ಎಂ. ಪಲ್ಲಂ ರಾಜು ಹೇಳಿದರು.

~ಬ್ರಾರ್ ಅವರ ಮೇಲೆ ನಡೆದ ಹಲ್ಲೆಯ ಹಿಂದೆ ಯಾರಿದ್ದಾರೆ ಎಂಬ ಮಾಹಿತಿ ನನ್ನಲ್ಲಿ ಇಲ್ಲ. ಅದಕ್ಕೆ ಉತ್ತರಿಸುವ ಸೂಕ್ತ ವ್ಯಕ್ತಿಯೂ ನಾನಲ್ಲ~ ಎಂದ ಅವರು, ~ಸೇನೆಯ ನಿವೃತ್ತ ಮತ್ತು ಹಿರಿಯ ಅಧಿಕಾರಿಗಳ ರಕ್ಷಣೆ ಕುರಿತು ಪ್ರತಿ ಆರು ತಿಂಗಳಿಗೊಮ್ಮೆ ಪರಾಮರ್ಶೆ ನಡೆಸಲಾಗುತ್ತಿದೆ~ ಎಂದೂ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT