ADVERTISEMENT

ಸ್ವದೇಶಿ ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2012, 19:30 IST
Last Updated 6 ನವೆಂಬರ್ 2012, 19:30 IST

ಕಾಂಗ್ರೆಸ್ ಮಾನ್ಯತೆ: ಸ್ವಾಮಿ ಅರ್ಜಿ ವಜಾ
ನವದೆಹಲಿ (ಪಿಟಿಐ):
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮಾನ್ಯತೆ ರದ್ದುಗೊಳಿಸಲು ಕೋರಿ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಚುನಾವಣಾ ಆಯೋಗ ವಜಾಗೊಳಿಸಿದೆ.

ಅಸೋಸಿಯೇಟೆಡ್ ಜರ್ನಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಕಾಂಗ್ರೆಸ್ ಪಕ್ಷವು 90 ಕೋಟಿ ರೂಪಾಯಿ ಸಾಲ ನೀಡಿದ್ದು ಇದು ಪಕ್ಷಗಳ ನೋಂದಣಿ ಕಾಯ್ದೆಯ ಉಲ್ಲಂಘನೆಯಾಗಿರುವುದರಿಂದ ಪಕ್ಷದ ಮಾನ್ಯತೆಯನ್ನು ರದ್ದುಗೊಳಿಸಲು ಸ್ವಾಮಿ ಈ ಸಂಬಂಧ ಆಯೋಗಕ್ಕೆ ಎರಡು ಪತ್ರಗಳನ್ನು ಬರೆದು ಒತ್ತಾಯಿಸಿದ್ದರು. ಸಂಸ್ಥೆಗೆ ಸಾಲ ನೀಡಿದ್ದು ರಾಜಕೀಯ ಪಕ್ಷಗಳ ನೋಂದಣಿ ಕಾಯ್ದೆಯ ಉಲ್ಲಂಘನೆಯಾಗದು, ಪಕ್ಷಗಳು ತಮ್ಮ ಆದಾಯ ಹೆಚ್ಚಳಕ್ಕೆ ಈ ರೀತಿ ಸಾಲ ನೀಡಿದ್ದರಲ್ಲಿ ತಪ್ಪೇನಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಶೀಘ್ರ ಕಾಂಗ್ರೆಸ್‌ನಲ್ಲಿ ಸಾಂಸ್ಥಿಕ ಬದಲಾವಣೆ ?
ನವದೆಹಲಿ (ಐಎಎನ್‌ಎಸ್): 
ದೀಪಾವಳಿಯ ನಂತರ ಕಾಂಗ್ರೆಸ್ ಪಕ್ಷದಲ್ಲಿ  ಹಲವು ಸಾಂಸ್ಥಿಕ ಬದಲಾವಣೆ ಗಳು ಆಗುವ ನಿರೀಕ್ಷೆ ಇದ್ದು. ರಾಹುಲ್ ಗಾಂಧಿ ಅವರು ಪ್ರಮುಖವಾದ ಪಾತ್ರವನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ  ಎನ್ನಲಾಗಿದೆ. ಆದರೆ, ಬದಲಾವಣೆ ಆಗುವುದೇ ಆದಲ್ಲಿ  ನವೆಂಬರ್ 22ರೊಳಗೆ ಆಗಬೇಕು. ಏಕೆಂದರೆ ಅಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ.

 ರಾಡಿಯಾ ಟೇಪ್: ಕಾಲಾವಕಾಶ
ನವದೆಹಲಿ (ಪಿಟಿಐ):
ಕಾರ್ಪೋರೇಟ್ ಕಂಪೆನಿಗಳ ಪರ ಲಾಬಿ ಮಾಡಿದ ಆರೋಪ ಎದುರಿಸುತ್ತಿರುವ ನೀರಾ ರಾಡಿಯಾ ಅವರು ನಡೆಸಿರುವ ದೂರವಾಣಿ ಸಂಭಾಷಣೆಗಳ ಧ್ವನಿಮುದ್ರಿಕೆಗಳ ನಕಲು ಒದಗಿಸಲು ಆದಾಯ ತೆರಿಗೆ ಇಲಾಖೆಗೆ ಇನ್ನೂ 2 ತಿಂಗಳುಗಳ ಕಾಲಾವಕಾಶವನ್ನು ಸುಪ್ರೀಂಕೋರ್ಟ್ ನೀಡಿದೆ.

ಕಳೆದ ಜನವರಿ 8ರಿಂದ ರಾಡಿಯಾ ಕಾರ್ಪೋರೇಟ್ ಕಂಪೆನಿಗಳೊಂದಿಗೆ ನೂರು ಗಂಟೆಗೂ ಅಧಿಕ ಹೊತ್ತು 5,800 ಸಂಭಾಷಣೆಗಳನ್ನು ನಡೆಸಿದ್ದು ಇವುಗಳ ಧ್ವನಿಮುದ್ರಿಕೆಗಳ ನಕಲನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಜಿ.ಎಸ್. ಸಿಂಘ್ವಿ ಹಾಗೂ ಎಸ್.ಜೆ. ಮುಖ್ಯೋಪಾಧ್ಯಾಯ ಅವರನ್ನು ಒಳಗೊಂಡ ಪೀಠ ಆದೇಶ ನೀಡಿದೆ. 

 ಪ್ರವೇಶ ಪರೀಕ್ಷೆಗೆ ಸೂಚನೆ
ನವದೆಹಲಿ
: ಗ್ರಾಮೀಣ ನಿರ್ವಹಣೆಗೆ ಸಂಬಂಧಿಸಿದ ಸ್ನಾತಕೋತ್ತರ ಕೋರ್ಸ್‌ಗಳಿಗೆ ಅಖಿಲ ಭಾರತ ಮಟ್ಟದಲ್ಲಿ ಪ್ರವೇಶ ಪರೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಗೆ(ಎಐಸಿಟಿಇ) ಸೂಚಿಸಿದೆ.

ಇಂಥಹ ಕೋರ್ಸ್‌ಗಳನ್ನು ಅಳವಡಿಸಿಕೊಂಡಿರುವ ಮ್ಯಾನೇಜ್‌ಮೆಂಟ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆ ನಡೆಸುವಂತೆ ಸೂಚಿಸಬೇಕೆಂದು ನ್ಯಾಯಪೀಠ ತಿಳಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT