ನವದೆಹಲಿ, (ಪಿಟಿಐ): ಸಿಬಿಐನ ಪ್ರಸಕ್ತ ವ್ಯವಸ್ಥೆಯನ್ನು ವಿಭಜಿಸದೆ ಮತ್ತು ಅದರ ಸ್ವಾಯತ್ತತೆಗೆ ಧಕ್ಕೆ ಉಂಟು ಮಾಡದೆ ಮೇಲ್ವಿಚಾರಣಾ ಅಧಿಕಾರವನ್ನು ಮಾತ್ರ ಲೋಕಪಾಲ ವ್ಯವಸ್ಥೆ ಹೊಂದಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ ಎದುರು ಅಭಿಪ್ರಾಯ ಮಂಡಿಸಲು ತನಿಖಾ ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ.
ಉದ್ದೇಶಿತ ಲೋಕಪಾಲ ಮಸೂದೆಯಲ್ಲಿ ಸಂಸ್ಥೆಯ ಅಧಿಕಾರವನ್ನು ಮೊಟಕುಗೊಳಿಸುವಂತಹ ನಿಯಮಗಳನ್ನು ಸೇರಿಸಬಾರದು. ತನಿಖೆ ವಿಚಾರದಲ್ಲಿ ಇನ್ನೂ ಹೆಚ್ಚಿನ ಸ್ವಾತಂತ್ರ್ಯ ನೀಡಬೇಕು ಎಂದು ಸಿಬಿಐ ನಿದೇಶಕ ಎ.ಪಿ.ಸಿಂಗ್ ಸ್ಥಾಯಿ ಸಮಿತಿಯನ್ನು ಒತ್ತಾಯಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈಗ ಸಿವಿಸಿ ಮತ್ತು ಸಿಬಿಐ ಮಧ್ಯೆ ಇರುವ ಕಾರ್ಯನಿರ್ವಹಣೆ ಸಂಬಂಧದ ಮಾದರಿಯಲ್ಲೇ ಲೋಕಪಾಲ ವ್ಯವಸ್ಥೆಯೂ ಇರಬೇಕು. ಸಿಬಿಐಗೆ ಆರ್ಥಿಕ, ಆಡಳಿತಾತ್ಮಕ ಮತ್ತು ಕಾನೂನಿನ ವಿಚಾರದಲ್ಲಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಹೊಸ ಲೋಕಪಾಲ ವ್ಯವಸ್ಥೆ ಅವಕಾಶ ಮಾಡಿಕೊಡುವಂತಾಗಬೇಕು ಎಂದು ಸಿಂಗ್ ಒತ್ತಾಯಿಸಲಿದ್ದಾರೆ.
ಲೋಕಪಾಲ ವ್ಯವಸ್ಥೆಯು ಪ್ರತ್ಯೇಕ ತನಿಖಾ ವಿಭಾಗವನ್ನು ಹೊಂದಿ ನಿಜಾಂಶ ತಿಳಿದುಕೊಂಡ ನಂತರ ತನಿಖೆಯನ್ನು ತನಗೆ ವಹಿಸಲು ಅವಕಾಶ ಇರಬೇಕು ಎಂಬ ಅಭಿಪ್ರಾಯವನ್ನು ಸಿಬಿಐ ಹೊಂದಿದೆ.
ಕೇಂದ್ರ ಜಾಗೃತ ಆಯೋಗ ಸಹ ಇದೇ ಅಭಿಪ್ರಾಯ ಹೊಂದಿದ್ದು, ತನಗಿರುವ ಈಗಿನ ಅಧಿಕಾರ ವ್ಯಾಪ್ತಿಯನ್ನೇ ಲೋಕಪಾಲ ವ್ಯವಸ್ಥೆಗೆ ಕೊಡುವುದರಿಂದ ಒಂದೇ ಕೆಲಸವನ್ನು ಎರಡು ಸಂಸ್ಥೆಗಳು ಮಾಡುವಂತಹ ಪರಿಸ್ಥಿತಿ ಉದ್ಭವಿಸಬಹುದು ಎಂಬ ಮುನ್ನೆಚ್ಚರಿಕೆಯನ್ನು, ಶುಕ್ರವಾರ ನಡೆಯಲಿರುವ ಸ್ಥಾಯಿ ಸಮಿತಿಯ ಸಭೆಗೆ ಆಯೋಗದ ಅಧಿಕಾರಿಗಳು ನೀಡಲಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.