ADVERTISEMENT

ಹಣಕಾಸು ಮಸೂದೆ: ನಡೆಯದ ಚರ್ಚೆ

ಸತತ ಏಳನೇ ದಿನದ ಕಲಾಪವೂ ಗದ್ದಲಕ್ಕೆ ಬಲಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 19:30 IST
Last Updated 13 ಮಾರ್ಚ್ 2018, 19:30 IST

ನವದೆಹಲಿ: ಸತತ ಏಳನೇ ದಿನವಾದ ಮಂಗಳವಾರವೂ ಸಂಸತ್ತಿನ ಎರಡೂ ಸದನಗಳ ಕಲಾಪವು ವಿರೋಧ ಪಕ್ಷಗಳ ಗದ್ದಲ, ಗಲಾಟೆಗೆ ಬಲಿಯಾದವು.

ಇದರಿಂದಾಗಿ ಮಹತ್ವದ ‘ಹಣಕಾಸು ಮಸೂದೆ 2018–19’ ಮೇಲಿನ ಚರ್ಚೆಗೆ ಅವಕಾಶ ಸಿಗಲಿಲ್ಲ.

ಬಜೆಟ್‌ ಅಧಿವೇಶನ ಆರಂಭವಾದ ದಿನದಿಂದ ಕಲಾಪಗಳಿಗೆ ಅಡ್ಡಿ ಪಡಿಸುತ್ತಿರುವ ವಿರೋಧ ಪಕ್ಷಗಳನ್ನು ಕಟ್ಟಿ ಹಾಕುವ ದೃಷ್ಟಿಯಿಂದ ಸರ್ಕಾರ ಹಣಕಾಸು ಮಸೂದೆಯನ್ನು ಅಂಗೀಕರಿಸಲು ಮುಂದಾಯಿತು.

ADVERTISEMENT

ಲೋಕಸಭೆ ಕಲಾಪ ಆರಂಭವಾಗುತ್ತಲೇ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಆರಂಭಿಸಿದರು. ಸ್ಪೀಕರ್‌ ಸುಮಿತ್ರಾ ಮಹಾಜನ್‌ ಮಧ್ಯಾಹ್ನದವರೆಗೆ ಕಲಾಪ ಮುಂದೂಡಿದರು.

ಮಧ್ಯಾಹ್ನದ ನಂತರ ಕಲಾಪ ಸೇರುತ್ತಿದ್ದಂತೆಯೇ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಎಐಎಡಿಎಂಕೆ, ಟಿಆರ್‌ಎಸ್‌, ಎನ್‌ಸಿಪಿ, ಆರ್‌ಜೆಡಿ, ಸಿಪಿಎಂ, ನ್ಯಾಷನಲ್‌ ಕಾನ್ಫರೆನ್ಸ್‌ ಸದಸ್ಯರು ಪ್ರತಿಭಟನೆ ನಡೆಸಿದರು. ಎನ್‌ಡಿಎ ಅಂಗಪಕ್ಷ ಟಿಡಿಪಿಯ ಸಂಸದರೂ ಅವರ ಜತೆಗೂಡಿದರು.

ಇದರಿಂದಾಗಿ ಪ್ರಶ್ನೋತ್ತರ ವೇಳೆ ಮತ್ತು ಶೂನ್ಯವೇಳೆಗಳು ಗದ್ದಲದಲ್ಲಿ ಕೊಚ್ಚಿ ಹೋದವು. ಬಿಜೆಪಿ ತನ್ನ ಸದಸ್ಯರಿಗೆ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ವಿಪ್‌ ಜಾರಿ ಮಾಡಿದೆ.

‘ಚರ್ಚೆ ಇಲ್ಲದೆ ಹಣಕಾಸು ಮಸೂದೆಗೆ ಅಂಗೀಕಾರ ಪಡೆಯಬೇಕು ಎಂದಿದ್ದರೆ ಸಂಸತ್‌ ಕಲಾಪ ಏಕೆ ಬೇಕು’ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು. ಸರ್ಕಾರದ ನಡೆಯನ್ನು ದುರಂಹಕಾರದ ಪ್ರತೀಕ ಎಂದು ಅವರು ಟೀಕಿಸಿದರು.

ರಾಜ್ಯಸಭೆಯಲ್ಲಿ ಪಿಎನ್‌ಬಿ ಪ್ರತಿಧ್ವನಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಕೋರಿ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಕೋಲಾಹಲ ಸೃಷ್ಟಿಸಿದವು. ಇದರಿಂದಾಗಿ ಮೂರು ಬಾರಿ ಕಲಾಪ ಮುಂದೂಡಲಾಯಿತು.

ಹಾಗಾಗಿ ಕೃಷಿ, ರೈಲ್ವೆ, ಸಾಮಾಜಿಕ ನ್ಯಾಯದಂತಹ ಮಹತ್ವದ ವಿಷಯಗಳ ಚರ್ಚೆಗೆ ಆಸ್ಪದ ಸಿಗಲಿಲ್ಲ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಒತ್ತಾಯಿಸಿ ಟಿಡಿಪಿ ಸದಸ್ಯರು ಏಳನೇ ದಿನವೂ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.