ADVERTISEMENT

ಹರಿದ್ವಾರ: ಕಾಲ್ತುಳಿತಕ್ಕೆ 16 ಬಲಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2011, 19:30 IST
Last Updated 8 ನವೆಂಬರ್ 2011, 19:30 IST
ಹರಿದ್ವಾರ: ಕಾಲ್ತುಳಿತಕ್ಕೆ 16 ಬಲಿ
ಹರಿದ್ವಾರ: ಕಾಲ್ತುಳಿತಕ್ಕೆ 16 ಬಲಿ   

ಹರಿದ್ವಾರ (ಉತ್ತರಾಖಂಡ) (ಪಿಟಿಐ):  ಗಂಗಾ ನದಿಯ ತಟದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 16 ಜನರು ಮೃತಪಟ್ಟ ದಾರುಣ ಘಟನೆ ಮಂಗಳವಾರ ನಡೆದಿದೆ.

ಹರಿದ್ವಾರ ಸಮೀಪದ ಹರ್ ಕಿ ಪೌರಿ ಯಲ್ಲಿ ಈ ದುರ್ಘಟನೆ ನಡೆದಿದ್ದು, ಮೃತಪಟ್ಟವರಲ್ಲಿ 14 ಮಂದಿ ಮಹಿಳೆಯರು ಹಾಗೂ ಇಬ್ಬರು ಮಕ್ಕಳಿದ್ದಾರೆ. ಘಟನೆಯಲ್ಲಿ ಒಟ್ಟು 32 ಜನರು ಗಾಯಗೊಂಡಿದ್ದಾರೆ.

ಶಾಂತಿಕುಂಜ್ ಆಶ್ರಮದ ಸಂಸ್ಥಾಪಕಮತ್ತು `ಅಖಿಲ ವಿಶ್ವ ಗಾಯತ್ರಿ ಪರಿವಾರ~ ಸ್ಥಾಪಕರಾದ ಆಚಾರ್ಯ ಪಂಡಿತ್ ಶ್ರೀರಾಮ್ ಶರ್ಮಾ ಅವರ ಶತಮಾನೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಚಂಡಿದ್ವೀಪ ಘಾಟ್‌ನಲ್ಲಿ ಮಂಗಳವಾರ ಯಾಗ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು.

ಭಾರಿ ಸಂಖ್ಯೆಯಲ್ಲಿದ್ದ ಭಕ್ತರು ಯಾಗ ಶಾಲೆಗೆ ಪ್ರವೇಶಿಸಲು ಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 16 ಜನ ಮೃತಪಟ್ಟಿದ್ದಾರೆ ಎಂದು ಹರಿದ್ವಾರದ ಉಪ ವಿಭಾಗಾಧಿಕಾರಿ  ಹರ್ಬೀರ್ ಸಿಂಗ್ ಹೇಳಿದ್ದಾರೆ.

`ಯಾಗ ಶಾಲೆಯಲ್ಲಿ ಸ್ಥಳಾವಕಾಶ ಕಡಿಮೆ ಇದ್ದುದರಿಂದ ದುರ್ಘಟನೆ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಆದರೆ ಘಟನೆಗೆ ನಿಖರ ಕಾರಣ ತನಿಖೆ ನಂತರ ತಿಳಿಯಲಿದೆ~ ಎಂದು ಹೇಳಿದ್ದಾರೆ. ಕಾಲ್ತುಳಿತ ಸಂಭವಿಸಿದ ಸಂದರ್ಭದಲ್ಲಿ  ಹಿಮಾಚಲ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಲ್ ಅಲ್ಲಿದ್ದರು.

ಆಶ್ರಮದಲ್ಲಿ ನಡೆಯುತ್ತಿದ್ದ ಯಜ್ಞದಲ್ಲಿ ಅವರು ತೊಡಗಿಕೊಂಡಿದ್ದರು. ಕುಂಭ ಮೇಳದ ಬಳಿಕ ಹರಿದ್ವಾರದಲ್ಲಿ ನಡೆದ ಅತ್ಯಂತ ದೊಡ್ಡ ಧಾರ್ಮಿಕ ಕಾರ್ಯಕ್ರಮ ಇದಾಗ್ದ್ದಿದು,  2 ಲಕ್ಷಕ್ಕೂ ಅಧಿಕ ಜನ ಸೇರಿದ್ದರು. ಇಷ್ಟು ದೊಡ್ಡ ಕಾರ್ಯಕ್ರಮ ಆಯೋಜಿಸುವಾಗ ಪೊಲೀಸ್ ಹಾಗೂ ಸ್ಥಳೀಯ ಆಡಳಿತದ ನೆರವು ಕೋರದೇ ಇರುವುದಕ್ಕೆ ಪೊಲೀಸರು ಶಾಂತಿಕುಂಜ್ ಆಶ್ರಮದ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪರಿಹಾರ ಘೋಷಣೆ:ಕಾಲ್ತುಳಿತ ದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ  ಹಾಗೂ ರಾಜ್ಯ ಸರ್ಕಾರ ಪರಿಹಾರ ಘೋಷಿಸಿವೆ. ದುರ್ಘಟನೆಯಲ್ಲಿ ಮೃತಪಟ್ಟವರಿಗೆ ತೀವ್ರ ಸಂತಾಪ ಸೂಚಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೃತಪಟ್ಟವರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನೂ ಅವರು ಘೋಷಿಸಿದ್ದಾರೆ ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ರಾಜ್ಯ ಸರ್ಕಾರದಿಂದ 2 ಲಕ್ಷ:  ಘಟನೆಯಲ್ಲಿ ಮೃತಪಟ್ಟ 16 ಜನರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಉತ್ತರಾಖಂಡ ಮುಖ್ಯಮಂತ್ರಿ ಬಿ.ಸಿ ಖಂಡೂರಿ ಘೋಷಿಸಿದ್ದಾರೆ.

ಗಾಯತ್ರಿ ಪರಿವಾರದಿಂದ ಪರಿಹಾರ:   ಘಟನೆಯ ನೈತಿಕ ಹೊಣೆಯನ್ನು ಹೊತ್ತುಕೊಂಡಿರುವ ಗಾಯತ್ರಿ ಪರಿವಾರವು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದೆ.

ಧಾರ್ಮಿಕ ಕಾರ್ಯಕ್ರಮ ಗುರುವಾರ ಅಂತ್ಯಗೊಳ್ಳಬೇಕಿತ್ತು. ಆದರೆ ಕಾಲ್ತುಳಿತ ಸಂಭವಿಸಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವು ಬುಧವಾರ ಕೊನೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.