ಲಖನೌ (ಐಎಎನ್‌ಎಸ್): ಪಟ್ಟಣ ಪಂಚಾಯಿತಿ ಅಧ್ಯಕ್ಷರ ಪ್ರಮಾಣವಚನ ಸ್ವೀಕಾರದ ಹರ್ಷಾಚರಣೆ ವೇಳೆ ಬಂದೂಕಿನಿಂದ ಹಾರಿದ ಗುಂಡಿಗೆ 10 ವರ್ಷದ ಬಾಲಕನೊಬ್ಬ ಬಲಿಯಾದ ಘಟನೆ ಬರೇಲಿಯಲ್ಲಿ ಸಂಭವಿಸಿದೆ.
ಇದರೊಂದಿಗೆ, ಹರ್ಷಾಚರಣೆ ವೇಳೆ ಗುಂಡು ಹಾರಿಸುವುದನ್ನು ಅಧಿಕೃತವಾಗಿ ನಿಷೇಧಿಸಿರುವುದರ ನಡುವೆಯೂ, ನಾಲ್ಕು ತಿಂಗಳಲ್ಲಿ ಮೂವರು ಬಾಲಕರು ಸೇರಿ ಒಟ್ಟು ಆರು ಜನ ಉತ್ತರ ಪ್ರದೇಶದಲ್ಲಿ ಇದೇ ರೀತಿ ಸಾವಿಗೀಡಾದಂತೆ ಆಗಿದೆ.
ಇಲ್ಲಿಗೆ 250 ಕಿ.ಮೀ. ದೂರದಲ್ಲಿರುವ ಬರೇಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ರಿಯಾಜ್ ಅನ್ಸಾರಿ ಎಂಬುವವರು ಆಯ್ಕೆಯಾಗಿದ್ದು, ಸೋಮವಾರ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುತ್ತಿತ್ತು.
ಆಗ ಇದ್ದಕ್ಕಿದ್ದಂತೆ ಅನ್ಸಾರಿ ಬೆಂಬಲಿಗನೊಬ್ಬ ಆನಂದಾತಿರೇಖದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲು ಆರಂಭಿಸಿದ. ಬಂದೂಕಿನಿಂದ ಹಾರಿದ ಕೆಲವು ಗುಂಡುಗಳ ಪೈಕಿ ಒಂದು ಗುಂಡು ಘಟನೆಯನ್ನು ನೋಡುತ್ತಾ ನಿಂತಿದ್ದ ಮೆಹ್ತಾಬ್ ತಲೆಯನ್ನು ಹೊಕ್ಕು ಆತ ಸ್ಥಳದಲ್ಲೇ ಮೃತಪಟ್ಟ. ದಾನಿಷ್ ಎಂಬಾತ ಈ ಕೃತ್ಯದ ಆರೋಪಿಯಾಗಿದ್ದು, ಬಂದೂಕಿಗೆ ಗುಂಡು ತುಂಬುತ್ತಿದ್ದಾಗ, ಆಕಸ್ಮಿಕವಾಗಿ ಹಾರಿ ದುರ್ಘಟನೆ ಸಂಭವಿಸಿತು ಎಂದಿದ್ದಾನೆ.
ಉತ್ತರ ಪ್ರದೇಶದಲ್ಲಿ, ವಿಶೇಷವಾಗಿ ಅಲ್ಲಿನ ಮಧ್ಯ ಹಾಗೂ ಪಶ್ಚಿಮ ಭಾಗದಲ್ಲಿ ರಾಜಕೀಯ ವಿಜಯೋತ್ಸವದ ವೇಳೆ ಇಂತಹ ದುರ್ಘಟನೆಗಳು ಪದೇಪದೇ ಸಂಭವಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.