ADVERTISEMENT

ಹವಾಮಾನ ಅಡ್ಡಿ: ಪತ್ತೆಯಾಗದ ಹೆಲಿಕಾಪ್ಟರ್

​ಪ್ರಜಾವಾಣಿ ವಾರ್ತೆ
Published 1 ಮೇ 2011, 19:30 IST
Last Updated 1 ಮೇ 2011, 19:30 IST

ಇಟಾನಗರ (ಪಿಟಿಐ): ಶನಿವಾರ ಬೆಳಿಗ್ಗೆ ಕಣ್ಮರೆಯಾದ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ದೋರ್ಜಿ ಖಂಡು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರಿನ ವೈಮಾನಿಕ ಶೋಧದ ಯತ್ನಕ್ಕೆ ಭಾನುವಾರ ಪ್ರತಿಕೂಲ ಹವಾಮಾನ ಅಡ್ಡಿಯಾಯಿತು. ಆದರೆ, ಸೇನಾ ಪಡೆ, ಎಸ್‌ಎಸ್‌ಬಿ, ಇಂಡೋ ಟಿಬೆಟ್ ಗಡಿ ಪೊಲೀಸ್ ಮತ್ತು ರಾಜ್ಯ ಪೊಲೀಸರು ಜಂಟಿಯಾಗಿ ಭೂ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ತವಾಂಗ್ ಮತ್ತು ತೆಂಗಾ ವಲಯಗಳಿಂದ 2400 ಸೇನಾ ಸಿಬ್ಬಂದಿಯನ್ನು ಕರೆಸಿಕೊಂಡು ಭಾರತ- ಭೂತಾನ್ ಗಡಿಭಾಗದ ವಿವಿಧೆಡೆ ಶೋಧ ಕಾರ್ಯಕ್ಕೆ ನಿಯೋಜಿಸಲಾಗಿದೆ. ಈ ಮುಂಚೆ ನಿಗದಿಯಾಗಿದ್ದಂತೆ ಹೆಲಿಕಾಪ್ಟರ್‌ಗಳ ಶೋಧ ಕಾರ್ಯ ಬೆಳಿಗ್ಗೆ 5.30ಕ್ಕೆ ಆರಂಭವಾಗಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ 3 ಗಂಟೆಗಳ ಕಾಲ ತಡವಾಗಿ ಶೋಧ ಆರಂಭವಾಯಿತು.

ಕೇಂದ್ರ ಸಚಿವರಾದ ಮುಕುಲ್ ವಾಸ್ನಿಕ್ ಮತ್ತು ವಿ.ನಾರಾಯಣ ಸ್ವಾಮಿ ಅವರು ದೆಹಲಿಯಿಂದ ಇಟಾನಗರಕ್ಕೆ ಬಂದು ಶೋಧ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು.

ADVERTISEMENT

ಇಡೀ ಪ್ರದೇಶವನ್ನು ವಿಶೇಷ ರೇಡಾರ್ ನೆರವಿನಿಂದ ಜಾಲಾಡಬಲ್ಲ ಎರಡು ಸುಕೋಯ್ ವಿಮಾನಗಳು ಬರೇಲಿಯಿಂದ  ಬಂದಿವೆ. ಈ ಹಿಂದೆ ಆಂಧ್ರದ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್.ರಾಜಶೇಖರ ರೆಡ್ಡಿ ಅವರಿದ್ದ ಹೆಲಿಕಾಪ್ಟರ್ ಅರಣ್ಯದಲ್ಲಿ ಅಪಘಾತಕ್ಕೀಡಾಗಿದ್ದಾಗ ಸುಖೋಯ್ ಯುದ್ಧ ವಿಮಾನಗಳು ಶೋಧ ಕಾರ್ಯದಲ್ಲಿ ನೆರವಾಗಿದ್ದವು.

ನೆರೆಯ ಭೂತಾನ್ ರಾಷ್ಟ್ರ ಕೂಡ ಶೋಧ ಕಾರ್ಯಕ್ಕೆ ಸಹಕಾರ ನೀಡಿದ್ದು, ಅಲ್ಲಿನ ಏಳು ಜಿಲ್ಲೆಗಳಲ್ಲಿ ಹುಡುಕಾಟ ನಡೆದಿದೆ. ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಭೂತಾನ್ ಪ್ರಧಾನಿ ಜಿಗ್ಮೆ ಥಿನ್ಲೆ ಅವರೊಂದಿಗೆ ಮಾತನಾಡಿ ಶೋಧ ಕಾರ್ಯದಲ್ಲಿ ನೆರವು ಕೋರಿದರು.

ಭೂತಾನ್ ಗಡಿಗೆ ಹೊಂದಿಕೊಂಡ ಪ್ರದೇಶಕ್ಕೆ ಸಿಬ್ಬಂದಿಯನ್ನು ಕರೆದುಕೊಂಡು ಹೋಗಲು ಸೂಕ್ತ ವ್ಯವಸ್ಥೆ ಮಾಡುವ ಕುರಿತು ಇಬ್ಬರ ನಡುವೆ ಚರ್ಚೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.