ADVERTISEMENT

ಹಿಮಗಡ್ಡೆ ಕುಸಿತ: 9 ನಾಗರಿಕರ ರಕ್ಷಣೆ, 3 ಯೋಧರು ಇನ್ನೂ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 8:30 IST
Last Updated 24 ಫೆಬ್ರುವರಿ 2012, 8:30 IST

ಶ್ರೀನಗರ (ಪಿಟಿಐ): ಕಾಶ್ಮೀರದ ಸೋನಾಮಾರ್ಗ್ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಸಂಭವಿಸಿದ ಹಿಮಗಡ್ಡೆ ಕುಸಿತದಲ್ಲಿ ಸಿಲುಕಿದ್ದ 9 ಮಂದಿ ನಾಗರಿಕರನ್ನು  ಸ್ಥಳೀಯ ಅಧಿಕಾರಿಗಳು ಸೇನೆಯ ನೆರವಿವೊಂದಿಗೆ ಶುಕ್ರವಾರ ರಕ್ಷಿಸಿದ್ದಾರೆ. ಆದರೆ ಗುರೆಝ್ ವಿಭಾಗದಲ್ಲಿ  ಹಿಮಗಡ್ಡ ಕುಸಿತದಲ್ಲಿ ಸಿಲುಕಿ ಕಣ್ಮರೆಯಾಗಿರುವ ಮೂವರು ಯೋಧರನ್ನು ಜೀವಂತವಾಗಿ ರಕ್ಷಿಸುವ ಭರವಸೆ ಕ್ಷೀಣಿಸಿದೆ.

~9 ಮಂದಿ ನಾಗರಿಕರನ್ನು ಹಿಮಗಡ್ಡೆ ಕುಸಿತ ಸಂಭವಿಸಿದ ಸೋನಾಮಾರ್ಗ್ ಪ್ರದೇಶದಲ್ಲಿ ಈದಿನ ಬೆಳಗ್ಗೆ ಸೇನೆಯ ನೆರವಿನೊಂದಿಗೆ ರಕ್ಷಿಸಲಾಗಿದೆ~ ಎಂದು ನೈಸರ್ಗಿಕ ಪ್ರಕೋಪ ನಿರ್ವಹಣಾ ಕೋಶದ ಸಂಯೋಜಕ ಅಮೀರ್ ಅಲಿ ತಿಳಿಸಿದರು.

~ಇಲ್ಲಿಗೆ 85 ಕಿಮೀ ದೂರದಲ್ಲಿರುವ ಸೋನಾಮಾರ್ಗದಿಂದ ಗಂದೇರ್ಬಲ್ ಗೆ ಮೂವರು ಸರ್ಕಾರಿ ನೌಕರರು ಬುಧವಾರ ಪಾದಯಾತ್ರೆ ಹೊರಟಿದ್ದರು. ಆದರೆ ಅವರ ಪೈಕಿ ಇಬ್ಬರು ಮಾರ್ಗ ಮಧ್ಯೆ ಹಿಮಗಡ್ಡೆ ಕುಸಿತಕ್ಕೆ ಸಿಲುಕಿ ಕಣ್ಮರೆಯಾದರು. ಅವರ ಪೈಕಿ ಒಬ್ಬರು ಮಾತ್ರ ಗಂದೇರ್ಬಲ್ ತಲುಪಿ, ಅಲ್ಲಿನ ಆಡಳಿತಕ್ಕೆ ಕಣ್ಮರೆಯಾದ ಇಬ್ಬರ ಬಗ್ಗೆ ತಿಳಿಸಿದರು. ಆದರೆ ಕಣ್ಮರೆಯಾಗಿದ್ದ ವ್ಯಕ್ತಿಗಳು ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿ ತಾವು ಶಿತ್ಕರಿ ಸೇತುವೆಯ ಕೆಳಭಾಗದಲ್ಲಿ ನಿಂತಿರುವುದಾಗಿ ತಿಳಿಸಿದರು~ ಎಂದು ಅವರು ವಿವರಿಸಿದರು.

ಸುದ್ದಿ ತಿಳಿಯುತ್ತಿದ್ದಂತೆಯೇ ಹೊರಟ ರಕ್ಷಣಾ ತಂಡ ಸ್ಥಳಕ್ಕೆ ತಲುಪಿದಾಗ ಅಲ್ಲಿ ಇಬ್ಬರು ನೌಕರರು ಸೇರಿದಂತೆ ಸಿಕ್ಕಿಹಾಕಿಕೊಂಡಿದ್ದ 9 ಮಂದಿ ಪತ್ತೆಯಾದರು. ಅವರೆಲ್ಲರನ್ನೂ ಚೀತಾ ಹೆಲಿಕಾಪ್ಟರುಗಳ ಮೂಲ ಸೋನಾಮಾರ್ಗಕ್ಕೆ ಕರೆತಂದು ಅಲ್ಲಿಂದ ಮಿ-17 ವಿಮಾನದ ಮೂಲಕ ಗಂದೇರ್ಬಲ್ ಜಿಲ್ಲಾ ಕೇಂದ್ರ ಕಚೇರಿಗೆ ಕಳುಹಿಸಲಾಯಿತು~ ಎಂದು ಅವರು ನುಡಿದರು.

ಸೋನಾಮಾರ್ಗ್ ಪ್ರದೇಶದಲ್ಲಿ ಬುಧವಾರ ಸಂಜೆ ಸಂಭವಿಸಿದ ಹಿಮಗಡ್ಡೆ ಕುಸಿತದಲ್ಲಿ ಮೂವರು ಯೋಧರು ಮೃತರಾಗಿ ಇತರ ಆರು ಮಂದಿ ಗಾಯಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.