ADVERTISEMENT

ಹಿಮಾಯತ್ ಬೇಗ್ ಅಪರಾಧಿ

ಪುಣೆ ಜರ್ಮನ್ ಬೇಕರಿ ಸ್ಫೋಟ ಪ್ರಕರಣ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

ಪುಣೆ (ಪಿಟಿಐ): ಜರ್ಮನ್ ಬೇಕರಿ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಏಕೈಕ ಭಯೋತ್ಪಾದಕ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಹಿಮಾಯತ್ ಬೇಗ್ ಅಪರಾಧಿ ಎಂದು ಪ್ರಕಟಿಸಿರುವ ಇಲ್ಲಿನ ಸೆಷನ್ ನ್ಯಾಯಾಲಯವು, ಶಿಕ್ಷೆಯ ಪ್ರಮಾಣವನ್ನು ಈ ತಿಂಗಳ 18ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದೆ.

17 ಜನರು ಸತ್ತು, 64 ಜನರು ಗಾಯಗೊಂಡಿದ್ದ ಈ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಬೇಗ್ ವಿರುದ್ಧ ಹೊರಿಸಲಾಗಿದ್ದ ಕೊಲೆ, ಕ್ರಿಮಿನಲ್ ಸಂಚು ಮತ್ತು ಇತರ ಆಪಾದನೆಗಳು ಸಾಬೀತಾಗಿವೆ ಎಂದು ಹೆಚ್ಚುವರಿ ಸೆಷನ್ ನ್ಯಾಯಾಧೀಶ ಎನ್. ಪಿ. ಧೋತೆ ತೀರ್ಪಿನಲ್ಲಿ ತಿಳಿಸಿದ್ದಾರೆ.

ತಮ್ಮೆದುರಿಗೆ ಹಾಜರುಪಡಿಸಲಾದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಬೇಗ್ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 302 (ಕೊಲೆ), 307 (ಕೊಲೆಗೆ ಯತ್ನ),  435 (ಸ್ಫೋಟಕ ಸಾಧನ ಬಳಿಸಿ ದುಷ್ಕೃತ್ಯ),  474 (ಮೋಸ), 153 ಎ (ಜಾತಿ, ಜನಾಂಗದ ಆಧಾರದ ಮೇಲೆ ವೈಷಮ್ಯ ಹುಟ್ಟು ಹಾಕುವುದು) ಮತ್ತು  120 ಬಿ ( ಕ್ರಿಮಿನಲ್ ಸಂಚು) ಪ್ರಕಾರ ಮಾಡಲಾಗಿರು ಆಪಾದನೆಗಳು ಸಾಬೀತಾಗಿವೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಬೇಗ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಮತ್ತು ಸ್ಫೋಟಕ ವಸ್ತು ಕಾಯ್ದೆಯಡಿ ಮಾಡಿರುವ ಆಪಾದನೆಗಳೂ ಸಾಬೀತಾಗಿವೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ದೇಶಕ್ಕೆ ಭೇಟಿ ನೀಡಿದ ವಿದೇಶಿ ಪ್ರಜೆಗಳ ಜೀವಕ್ಕೆ ಹಾನಿಯುಂಟು ಮಾಡಿ ದೇಶದಲ್ಲಿ ವಿದೇಶಿ ಪ್ರಜೆಗಳಿಗೆ ಸೂಕ್ತ ಭದ್ರತೆ ಇಲ್ಲ ಎಂಬ ಭಾವನೆ ಮೂಡಿಸಲು  (ಜರ್ಮನ್ ಬೇಕರಿ ಸ್ಫೋಟದಲ್ಲಿ ಐವರು ವಿದೇಶಿ ಪ್ರಜೆಗಳು ಸತ್ತಿದ್ದಾರೆ) ಈ ಭಯೋತ್ಪಾದಕ ಕೃತ್ಯ ಎಸಗಲಾಗಿದೆ ಎಂಬ ಪ್ರಾಸಿಕ್ಯೂಷನ್ ವಾದವನ್ನು ನ್ಯಾಯಾಧೀಶರು ಒಪ್ಪಿಕೊಂಡಿದ್ದಾರೆ.

ಲಷ್ಕರ್ ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಭಯೋತ್ಪಾದಕ ಡೇವಿಡ್ ಹೆಡ್ಲಿ ಷಿಕಾಗೊ ನ್ಯಾಯಾಲಯದಲ್ಲಿ ಹೇಳಿಕೆ ನೀಡಿ `ತಾನು ಮತ್ತು ತನ್ವರ್ ರಾಣಾ ಸೇರಿಕೊಂಡು ಯುವಜನರ ನೆಚ್ಚಿನ ತಾಣವಾದ ಜರ್ಮನ್ ಬೇಕರಿಯ ಚಿತ್ರಗಳನ್ನು ತೆಗೆದಿದ್ದು ನಿಜ' ಎಂದು ಒಪ್ಪಿಕೊಂಡ ವಿಚಾರವನ್ನೂ ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಭಯೋತ್ಪಾದಕರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಅವರ ಪೈಕಿ ಬೇಗ್‌ನನ್ನು ಮಾತ್ರ ಬಂಧಿಸಲಾಗಿದೆ. ಇತರ  ಭಯೋತ್ಪಾದಕರಾದ ಯಾಸಿನ್ ಭಟ್ಕಳ್, ಇಕ್ಬಾಲ್ ಭಟ್ಕಳ್, ಮೊಹಿಸಿನ್ ಚೌಧರಿ, ರಿಯಾಜ್ ಭಟ್ಕಳ್ ಮತ್ತು ಫಯಾಜ್ ತಲೆ ಮರೆಸಿಕೊಂಡಿದ್ದಾರೆ. ಇನ್ನೊಬ್ಬ ಭಯೋತ್ಪಾದಕ ಜಬಿಯುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್‌ನನ್ನು ಮುಂಬೈ ದಾಳಿ ಸಂಚಿಗೆ ಸಂಬಂಧಿಸಿದಂತೆ ಬಂಧಿಸಿರುವುದರಿಂದ ಜರ್ಮನ್ ಬೇಕರಿ ಸ್ಫೋಟ ಪ್ರಕರಣದಲ್ಲಿ ಬಂಧಿಸಿಲ್ಲ.

ಈ ಎಲ್ಲಾ ಭಯೋತ್ಪಾದಕರಿಗೂ ಪಾಕಿಸ್ತಾನ ಮೂಲದ ಎಲ್‌ಇಟಿ ಸಂಘಟನೆಯ ಮತ್ತು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಜತೆ ನಿಕಟ ಸಂಪರ್ಕವಿದೆ  ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳವು (ಎಟಿಎಸ್) ಬೇಗ್‌ನನ್ನು ಬೀಡ್ ಜಿಲ್ಲೆಯ ಉದ್‌ಗಿರ್‌ನಲ್ಲಿ 2010ರ ಸೆಪ್ಟೆಂಬರ್ 7ರಂದು ಬಂಧಿಸಿತ್ತು. ಇತರ ಆರು ಮಂದಿ ಜತೆ ಸೇರಿಕೊಂಡು ಬೇಗ್ ಕ್ರಿಮಿನಲ್ ಸಂಚು ನಡೆಸಿ ಬಾಂಬ್ ಸ್ಫೋಟ ನಡೆಸಿದ್ದ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು.
ಜರ್ಮನ್ ಬೇಕರಿ ಬಾಂಬ್ ಸ್ಫೋಟದ ಸಂಚನ್ನು ಶ್ರೀಲಂಕಾದ ಕೊಲಂಬೊದಲ್ಲಿ 2008ರ ಮಾರ್ಚ್‌ನಲ್ಲಿ ರೂಪಿಸಲಾಗಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿತ್ತು.

ಶ್ರೀಲಂಕಾಕ್ಕೇ ಭೇಟಿ ನೀಡಿದ್ದ ಬೇಗ್ ನಂತರದಲ್ಲಿ ಬೇಗ್ ಉದ್‌ಗಿರ್‌ನಲ್ಲಿ ನೆಲೆಸಿ ಸೈಬರ್ ಕೆಫೆಯನ್ನು ಆರಂಭಿಸಿದ್ದ ಹಾಗೂ ಬೇರೆ ಬೇರೆ ಇ-ಮೇಲ್ ವಿಳಾಸಗಳ ಮೂಲಕ ಇತರ ಆಪಾದಿತರ ಜತೆ ಸಂಪರ್ಕದಲ್ಲಿ ಇದ್ದ. 2010ರ ಜನವರಿ 31ರಂದು ಪುಣೆಗೆ ಭೇಟಿ ನೀಡಿದ ಬೇಗ್ ಜರ್ಮನ್ ಬೇಕರಿ ಸುತ್ತಮುತ್ತ ಪರಿಶೀಲನೆ ನಡೆಸಿ ನಂತರ ಯಾಸಿನ್ ಭಟ್ಕಳ್ ಜತೆ ಸೇರಿಕೊಂಡು ಸ್ಫೋಟಕಗಳನ್ನು ಕೆಲವು ಟೇಬಲ್‌ಗಳ ಅಡಿಯಲ್ಲಿ ಅಳವಡಿಸಿ ನಂತರ ಫೆಬ್ರುವರಿ 13ರಂದು ದೂರ ನಿಯಂತ್ರಣ ಸಾಧನದಿಂದ ಸ್ಫೋಟಿಸಿದ್ದ ಎಂದು ಎಟಿಎಸ್ ಆಪಾದಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 103 ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿದೆ. ಬೇಗ್ ಮತ್ತು ಇತರ ಆಪಾದಿತರ ಪರ ವಕೀಲರ ವಾದವನ್ನು ನ್ಯಾಯಾಧೀಶರು ತಳ್ಳಿಹಾಕಿದ್ದಾರೆ.

ಘಟನೆಯ ದಿನ ಬೇಗ್ ಔರಂಗಾಬಾದ್‌ನಲ್ಲಿ ಇದ್ದ ಮತ್ತು ಶ್ರೀಲಂಕಾಕ್ಕೆ ಬಟ್ಟೆ ಮಾರಲು ಹೋಗಿದ್ದ ಎಂಬ ಅಂಶಗಳನ್ನು ನ್ಯಾಯಾಲಯ ಪರಿಗಣಿಸಲಿಲ್ಲ.
ಮೇಲ್ಮನವಿ: ಸೆಷನ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಬೇಗ್ ಪರ ವಕೀಲ ಅಬ್ದುಲ್ ರೆಹಮಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.   ಆಪಾದಿತರಲ್ಲಿ ಒಬ್ಬನಾದ ಅಬು ಜುಂದಾಲ್‌ನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿಲ್ಲ ಎಂದು ರೆಹಮಾನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.