ADVERTISEMENT

ಹುಟ್ಟೂರಲ್ಲಿ ಮೊದಲ ಬಾರಿಗೆ ಕಣಕ್ಕೆ ನಾಮಪತ್ರ ಸಲ್ಲಿಸಿದ ಕರುಣಾನಿಧಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST

ತಿರುವರೂರ್ (ಪಿಟಿಐ): ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಮುಂಬರುವ ವಿಧಾನಸಭೆ ಚುನಾವಣೆಗೆ ಗುರುವಾರ ತಮ್ಮ ನಾಮಪತ್ರ ಸಲ್ಲಿಸಿದರು.ಆರು ದಶಕದ ರಾಜಕೀಯ ಜೀವನದಲ್ಲಿ 12ನೇ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 86 ವರ್ಷದ ಕರುಣಾನಿಧಿ ಇದೇ ಮೊದಲ ಬಾರಿಗೆ ತಮ್ಮ ಹುಟ್ಟೂರು ತಿರುವರೂರ್‌ನಿಂದ ನಿಂತಿದ್ದಾರೆ. ಅವರು ತಮ್ಮ ಪುತ್ರರಾದ ಎಂ.ಕೆ. ಸ್ಟಾಲಿನ್ ಮತ್ತು ಕೇಂದ್ರ ಸಚಿವ ಎಂ.ಕೆ. ಆಳಗಿರಿ ಅವರೊಂದಿಗೆ ತೆರಳಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.
 

ಅದಕ್ಕೂ ಮುನ್ನ ಅವರು ಕಟ್ಟೂರು ಗ್ರಾಮಕ್ಕೆ ತೆರಳಿ ತಮ್ಮ ತಾಯಿ ಅಂಜುಗಂ ಅವರ ಸ್ಮಾರಕಕ್ಕೆ ನಮನ ಸಲ್ಲಿಸಿದರು. ತಿರುವರೂರ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪೂರೈಸಿದ ಕರುಣಾನಿಧಿ 1937ರಲ್ಲಿ ನಡೆದ ಹಿಂದಿ ವಿರೋಧಿ ಚಳವಳಿಯ ನೇತೃತ್ವ ವಹಿಸುವ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿರಿಸಿದರು. 1957ರಲ್ಲಿ ಕರೂರ್ ಜಿಲೆಯ ಕುಲಿಥಲೈ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಜಯಗಳಿಸಿದ ಅವರು ಇದುವರೆಗೆ ಒಮ್ಮೆಯೂ ಸೋಲು ಕಂಡಿಲ್ಲ.

41 ಕೋಟಿ ರೂ ಸಂಪತ್ತಿನ ಒಡೆಯ

ADVERTISEMENT

ಚೆನ್ನೈ (ಪಿಟಿಐ): ತಮ್ಮ ಬಳಿ ಸ್ಥಿರ ಆಸ್ತಿ ಇಲ್ಲ ಎಂದು ಘೋಷಿಸಿರುವ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ, ತಮಗೆ ಇಬ್ಬರು ಪತ್ನಿಯರಿದ್ದು, ತಮ್ಮ ಬಳಿ ಒಟ್ಟು 41.13 ಕೋಟಿ ರೂ ಮೌಲ್ಯದ ಚರ ಆಸ್ತಿ ಇದೆ ಎಂದು ಆಸ್ತಿ ವಿವರದಲ್ಲಿ ಬಹಿರಂಗಪಡಿಸಿದ್ದಾರೆ.

ಬ್ಯಾಂಕ್ ಖಾತೆಯಲ್ಲಿ 4.93 ಕೋಟಿ ರೂ ಇದ್ದು, ಮೊದಲ ಪತ್ನಿ ದಯಾಳು ಅಮ್ಮಲ್ ಹೆಸರಿನಲ್ಲಿ 15.34 ಕೋಟಿ ಮತ್ತು ಎರಡನೇ ಪತ್ನಿ ರಜತಿ ಅಮ್ಮಲ್ ಹೆಸರಿನಲ್ಲಿ 20.83 ಕೋಟಿ ರೂ ಚರ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಯಾವುದೇ ಕಾರು, ಕೃಷಿ ಭೂಮಿ ಅಥವಾ ಮನೆಯನ್ನು ತಾವು ಹೊಂದಿಲ್ಲ. 

 ತಮ್ಮ ವಾರ್ಷಿಕ ಆದಾಯ 37 ಲಕ್ಷ ರೂಗಳಾಗಿದ್ದು, ದಯಾಳು 64 ಲಕ್ಷ ಮತ್ತು ರಜತಿ 1.67 ಕೋಟಿ ರೂ ವರಮಾನ ಹೊಂದಿದ್ದಾರೆಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.