ADVERTISEMENT

ಹುಲಿ ಚಿರತೆಗಳ ತಾಣ...

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 9:15 IST
Last Updated 16 ಜನವರಿ 2011, 9:15 IST

ವಂಡಿಪೆರಿಯಾರ್/ಕೇರಳ (ಪಿಟಿಐ): ಶಬರಿಮಲೆಯಲ್ಲಿ ನೂಕುನುಗ್ಗಲು, ಸಾವುನೋವು ಸಂಭವಿಸಿದ ‘ಪುಲ್‌ಮೇಡು’, ವಿಶಾಲ ಹುಲ್ಲುಗಾವಲು ಪ್ರದೇಶವಾಗಿದ್ದು, ಹುಲಿ, ಚಿರತೆ ಇತ್ಯಾದಿ ಪ್ರಾಣಿಗಳ ಆವಾಸ ಸ್ಥಳವಾಗಿದೆ.ದುರಂತ ನಡೆದ ಜಾಗ  ‘ಪೆರಿಯಾರ್ ಹುಲಿ ರಕ್ಷಿತಾರಣ್ಯ’ ವ್ಯಾಪ್ತಿಗೆ ಸೇರಿದ ಪ್ರದೇಶವಾಗಿದ್ದು, ಕಗ್ಗತ್ತಲಲ್ಲಿ ಮಾಂಸಾಹಾರಿ ವನ್ಯ ಪ್ರಾಣಿಗಳ ದಾಳಿ ಉಂಟಾಗದಿದ್ದುದು ಅಪಘಾತಕ್ಕೀಡಾಗಿ ಗಾಯಗೊಂಡವರ ಅದೃಷ್ಟ ಎನ್ನಲಾಗಿದೆ.

ಪ್ರಾಚೀನ ಕಾಲದಿಂದಲೂ ಇದೇ ದಾರಿಯಲ್ಲಿ ಅಯ್ಯಪ್ಪ ವ್ರತಧಾರಿಗಳು ತಂಡೋಪತಂಡವಾಗಿ ಕಾಲುನಡಿಗೆಯಲ್ಲಿ ಅಯ್ಯಪ್ಪ ಸನ್ನಿಧಿ ತಲುಪುತ್ತಿದ್ದರು. ಪುಲ್‌ಮೇಡು ತಮಿಳುನಾಡಿಗೆ ನಿಕಟವಾಗಿದ್ದು, ಮದುರೆ, ಕಂಬಂ, ಥೇಣಿ ಮುಂತಾದೆಡೆಗೆ ಹತ್ತಿರದ ದಾರಿಯಾಗಿದೆ.  ಹುಲಿ, ಚಿರತೆಗಳಿಗೆ ಹೆದರಿ ವ್ರತಧಾರಿಗಳು ಗುಂಪು ಗುಂಪಾಗಿ ಸಂಚರಿಸುತ್ತಿದ್ದರು. ಅನೇಕರ ಮೇಲೆ ಇವುಗಳು ಆಕ್ರಮಣ ನಡೆಸಿದ ಘಟನೆಗಳೂ ನಡೆದಿವೆ.

ಸ್ವತಃ ಅಯ್ಯಪ್ಪನ ಜೀವನ ಚಿತ್ರಣವೂ ‘ಹುಲಿವಾಹನ’ ಆಖ್ಯಾನವನ್ನು ಹೊಂದಿದೆ.  ಪುಲ್‌ಮೇಡು ಹಾದಿಯಲ್ಲಿ ಸುಮಾರು ಎರಡು ಲಕ್ಷ ಭಕ್ತರು ಸಾಗುತ್ತಾರೆ ಎಂದು ಅಂದಾಜಿಸಲಾಗಿದೆ. ಈ ದಾರಿಯಲ್ಲಿ ಆಗಮಿಸಿ ಮಲೆ-ಏರುವ ವ್ರತಧಾರಿಗಳಿಗೆ ‘ಪಾಂಡಿ ತಾವಳಂ’ (ಪಾಂಡ್ಯದೇಶದಿಂದ ಬರುವವರ ಜಾಗ- ತಮಿಳುನಾಡು) ಮೊದಲ ವಿಶ್ರಾಂತಿಯ ಜಾಗವಾಗಿದೆ.

ಪಂಪಾ ನದಿಗೆ ಸಮೀಪ ಇರುವ ಶಬರಿಗಿರಿ ಸಮುದ್ರ ಮಟ್ಟದಿಂದ 914 ಮೀಟರ್ ಎತ್ತರದಲ್ಲಿದೆ. ಪ್ರತಿ ವರ್ಷ 30 ದಶಲಕ್ಷಕ್ಕೂ ಹೆಚ್ಚು ಭಕ್ತರು ಗಿರಿಗೆ ಭೇಟಿ ನೀಡುತ್ತಾರೆ.ದೇವಸ್ಥಾನದ ಮೂಲ ಶಿಬಿರವಾದ ‘ಪಂಪಾ’ ಈ ವರ್ಷವೂ ಕೆಲ ದಿನಗಳಿಂದಲೇ ಜನರಿಂದ ಗಿಜಿಗುಡುತ್ತಿತ್ತು. ಘಟನೆಗೆ ಕೆಲ ಸಮಯದ ಮುನ್ನ ದೇವರ ದರ್ಶನ ಪಡೆದಿದ್ದ ಲಕ್ಷಾಂತರ ಮಂದಿಯಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಸಹ ಸೇರಿದ್ದರು. ಗುರುವಾರ ರಾತ್ರಿ ಇಲ್ಲಿಗೆ ಬಂದಿದ್ದ ಒಬೆರಾಯ್ ಮಕರ ಜ್ಯೋತಿಯನ್ನು ವೀಕ್ಷಿಸಿ ಮುಂಬೈಗೆ ತೆರಳಿದ್ದರು. ಅಯ್ಯಪ್ಪನ ಪರಮ ಭಕ್ತರಾಗಿರುವ ಅವರು ಕಳೆದ 13 ವರ್ಷಗಳಿಂದಲೂ ಗಿರಿಗೆ ಭೇಟಿ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.