ADVERTISEMENT

ಹೆಂಡತಿ ಮನವೊಲಿಕೆಗೆ ಬಸ್ ಕದ್ದ ಭೂಪತಿ!

​ಪ್ರಜಾವಾಣಿ ವಾರ್ತೆ
Published 27 ಮೇ 2012, 19:30 IST
Last Updated 27 ಮೇ 2012, 19:30 IST

ಯಾವತ್ಮಲ್ (ಮಹಾರಾಷ್ಟ್ರ) (ಐಎಎನ್‌ಎಸ್): `ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು~ ಎನ್ನುತ್ತಾರೆ. ಆದರೆ ಮದುವೆಯಾದ ಹೆಂಡತಿ ತನ್ನ ಗಂಡನಿಗೆ ಕೆಲಸವಿಲ್ಲ ಎಂದು ಮನೆ ಬಿಟ್ಟು ಹೋದರೆ ಏನು ಮಾಡಬೇಕು?
ಇಂತಹ ಸಂಕಷ್ಟಕ್ಕೆ ಸಿಲುಕಿದ ರಾಜ್ಯ ಸಾರಿಗೆ ಇಲಾಖೆಯ ಮಾಜಿ ನೌಕರನೊಬ್ಬ, ತಾನು ನಿರುದ್ಯೋಗಿಯಲ್ಲ ಎಂದು ನಂಬಿಸಲು ಬಸ್ಸನ್ನೇ ಕಳವು ಮಾಡಿ ಸಿಕ್ಕಿಬಿದ್ದಿದ್ದಾನೆ.

ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಂಎಸ್‌ಆರ್‌ಟಿಸಿ) ಚಾಲಕನಾಗಿದ್ದ ದೇವೇಂದ್ರ ಎಂ.ನಿಂಬ್‌ಗಾಂವ್ಕರ್‌ನನ್ನು (35) ಕರ್ತವ್ಯ ಲೋಪ ಹಾಗೂ ಮದ್ಯವ್ಯಸನದ ಕಾರಣಕ್ಕೆ 2007ರಲ್ಲಿ ಸೇವೆಯಿಂದ ವಜಾ ಮಾಡಲಾಗಿತ್ತು. ಇದಾದ ಬಳಿಕ ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಮನೆ ಬಿಟ್ಟು ಹೋಗಿದ್ದರು.
ತಾನು ನಿರುದ್ಯೋಗಿಯಲ್ಲ ಎಂದು ಪತ್ನಿ ಹಾಗೂ ಮಕ್ಕಳನ್ನು ನಂಬಿಸುವುದು ಹೇಗೆ ಎಂದು ಆತ ತಲೆಕೆಡಿಸಿಕೊಂಡಿದ್ದ.

ಯಾವತ್ಮಲ್ ಡಿಪೊದಲ್ಲಿ ರಾತ್ರಿ ತಂಗುವ ಬಸ್ ಒಂದನ್ನು ನೋಡಿದ್ದೇ ತಡ ಅದನ್ನು ಕದಿಯುವ ಯೋಚನೆ ಆತನಿಗೆ ಬಂತು. ಮೇ 21ರ ರಾತ್ರಿ ಆ ಬಸ್ ಚಾಲನೆ ಮಾಡಿಕೊಂಡು ನಿಂಬ್‌ಗಾಂವ್ಕರ್ ಸೀದಾ ತನ್ನ ಹೆಂಡತಿಯ ಊರಿಗೆ ಹೋದ. ಮರುದಿನ ಬೆಳಿಗ್ಗೆ ಡಿಪೊದಲ್ಲಿ ಬಸ್ ಕಾಣದಿದ್ದಾಗ ಅಧಿಕಾರಿಗಳು ಕಂಗಾಲಾದರು. ಇಚೊರಾ ಗ್ರಾಮದಲ್ಲಿ ಬಸ್ ಪತ್ತೆಯಾಯಿತು. ಇದಾದ ಎರಡು ದಿನಗಳ ಬಳಿಕ ಪೊಲೀಸರು ನಿಂಬ್‌ಗಾಂವ್ಕರ್‌ನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.