ADVERTISEMENT

ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ:ಒಳ್ಳೆ ರಸ್ತೆಗಳೇ ಇಲ್ಲ; ಟೋಲ್ ಶುಲ್ಕ ಯಾಕೆ?: ಸುಪ್ರೀಂ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 9 ಮೇ 2012, 19:30 IST
Last Updated 9 ಮೇ 2012, 19:30 IST

ನವದೆಹಲಿ (ಪಿಟಿಐ): ಸರ್ಕಾರ ಜನರಿಗೆ ಒಳ್ಳೆ ರಸ್ತೆ ನಿರ್ಮಿಸಿಕೊಡಲು ವಿಫಲವಾಗಿದೆ. ಹೀಗಿರುವಾಗ ವಾಹನಗಳಿಗೆ ಟೋಲ್ ಶುಲ್ಕ ವಿಧಿಸುವುದಾದರೂ ಯಾಕೆ ಎಂದು ಬುಧವಾರ ಸುಪ್ರೀಂಕೋರ್ಟ್ ಕೇಂದ್ರವನ್ನು ಪ್ರಶ್ನಿಸಿದೆ.

ಟೋಲ್ ಶುಲ್ಕ ಕುರಿತು ಸ್ಪಷ್ಟನೆ ನೀಡುವಂತೆ ನ್ಯಾಯಮೂರ್ತಿಗಳಾದ ಡಿ.ಕೆ.ಜೈನ್ ಹಾಗೂ ಅನಿಲ್ ಆರ್. ದವೆ ಅವರನ್ನು ಒಳಗೊಂಡ ಪೀಠವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ನಿರ್ದೇಶನ ನೀಡಿದೆ.

`ಟೋಲ್ ಶುಲ್ಕಕ್ಕೆ ನೀವು ಅನುಸರಿಸುತ್ತಿರುವ ನೀತಿ ಏನು? ಸಾರ್ವಜನಿಕರಿಗೆ ಇದು ಗೊತ್ತಾಗಬೇಕು. ರಸ್ತೆ ನಿರ್ಮಾಣ ಕಾಮಗಾರಿಯು ಕೇವಲ ಕಟ್ಟಡ ನಿರ್ಮಾಣಗಾರರು ಹಾಗೂ ಗುತ್ತಿಗೆದಾರರಿಗೆ ಮಾತ್ರ ಲಾಭ ಮಾಡಿಕೊಟ್ಟರೆ ಸಾಲದು. ನನಗೆ ನಿಮ್ಮ ನೀತಿಯೇ ಅರ್ಥವಾಗುತ್ತಿಲ್ಲ. ಮಟ್ಟಸವಾದ ರಸ್ತೆಗಳೇ ಇಲ್ಲದಿರುವಾಗ ಜನ ಯಾಕೆ ಟೋಲ್ ಶುಲ್ಕ ಕಟ್ಟಬೇಕು~ ಎಂದು ಕೋರ್ಟ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.

`ನಮ್ಮ ರಸ್ತೆಗಳ ಅವಸ್ಥೆ ಹೇಗಿದೆ ನೋಡಿ, ಇಲ್ಲಿ ಗಂಭೀರ ಅಪಘಾತಗಳಾಗುತ್ತವೆ. ಆದರೆ ಪ್ರಯಾಣಿಕರು ಟೋಲ್ ಕಟ್ಟಬೇಕಾಗಿರುವುದು ವಿಪರ್ಯಾಸ~ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.`ಪೀಪಲ್ಸ್ ವಾಯ್ಸ~ ಎಂಬ ಸರ್ಕಾರೇತರ ಸಂಸ್ಥೆಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಪೀಠವು ಟೋಲ್ ಶುಲ್ಕವನ್ನು ಸಮರ್ಥಿಸುವ ಕೇಂದ್ರದ ನಿಲುವನ್ನು ಪ್ರಶ್ನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.