ADVERTISEMENT

ಹೆಲಿಕಾಪ್ಟರ್ ಹಿಂತಿರುಗಿಸಲು ರೆಡ್ಡಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ಹೈದರಾಬಾದ್:ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕರ್ನಾಟಕದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಮತ್ತು ಅವರ ಭಾವ ಬಿ.ವಿ.ಶ್ರೀನಿವಾಸರೆಡ್ಡಿ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಸಿಬಿಐ ವಶ ಪಡಿಸಿಕೊಂಡಿರುವ ಹೆಲಿಕಾಪ್ಟರ್ ಹಾಗೂ ಐಷಾರಾಮಿ ಕಾರುಗಳನ್ನು ಹಿಂತಿರುಗಿಸುವಂತೆ ಮನವಿ ಮಾಡಿದ್ದಾರೆ.

ಐಷಾರಾಮಿ ಕಾರುಗಳಲ್ಲಿ ಒಂದು ಬಿಎಂಡಬ್ಲ್ಯು ಮತ್ತು ರೋಲ್ಸ್‌ರಾಯ್ ಕಾರು ಸೇರಿದೆ. 2006ರಲ್ಲಿ ಓಬಳಾಪುರಂ ಮೈನಿಂಗ್ ಕಂಪೆನಿ ಹೆಸರಿನಲ್ಲಿ ಎರಡು ಕೋಟಿ ರೂಪಾಯಿಗೆ ಹೆಲಿಕಾಪ್ಟರ್ ಖರೀದಿ ಮಾಡಲಾಗಿದೆ. ಸಾಲ ಮಾಡಿ ಖರೀದಿ ಮಾಡಿದ್ದು, ಪ್ರತಿ ತಿಂಗಳೂ 10.31 ಲಕ್ಷ ರೂಪಾಯಿ ಕಂತು ಕಟ್ಟಲಾಗಿದೆ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ನಿಲುಗಡೆಗೆ 75 ಲಕ್ಷ ರೂಪಾಯಿಗಳನ್ನು ನೀಡಬೇಕಾಗಿದೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.

ಸಿಬಿಐ ವಶದಲ್ಲಿಯೇ ಹೆಲಿಕಾಪ್ಟರ್ ಮತ್ತು ಬೆಲೆಬಾಳುವ ಕಾರುಗಳನ್ನು ಇಟ್ಟರೆ ಹಾನಿಗೊಳಗಾಗುತ್ತವೆ. ಹಾಗಾಗಿ ಅವುಗಳ ಬಳಕೆಗೆ ಅವಕಾಶ ಕಲ್ಪಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಸಿಬಿಐ ಕೇಳಿದ ಸಂದರ್ಭದಲ್ಲಿ ಅವುಗಳನ್ನು ಹಿಂತಿರುಗಿಸಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ. ನ್ಯಾಯಾಧೀಶರು ಅರ್ಜಿಯ ವಿಚಾರಣೆಯನ್ನು ಫೆ.13ಕ್ಕೆ ಮುಂದೂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.