ADVERTISEMENT

ಹೈದರಾಬಾದ್‌ನಲ್ಲಿ ಉದ್ವಿಗ್ನ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2012, 19:30 IST
Last Updated 5 ನವೆಂಬರ್ 2012, 19:30 IST

ಹೈದರಾಬಾದ್ (ಐಎಎನ್‌ಎಸ್): ಇಲ್ಲಿಯ ಐತಿಹಾಸಿಕ ಚಾರ್‌ಮಿನಾರ್ ಸ್ಮಾರಕಕ್ಕೆ ಹೊಂದಿಕೊಂಡಂತೆ ಇರುವ ಭಾಗ್ಯಲಕ್ಷ್ಮಿ ದೇವಸ್ಥಾನದ ಜಾಗದಲ್ಲಿ ಹೊಸದಾಗಿ ನಿರ್ಮಾಣ ಕಾರ್ಯವನ್ನು ವಿರೋಧಿಸಿ ಒಂದು ಗುಂಪು ಹಿಂಸಾಚಾರಕ್ಕೆ ಇಳಿದ ಪರಿಣಾಮ ಹಳೆಯ ಹೈದರಾಬಾದ್ ನಗರದಲ್ಲಿ ಸೋಮವಾರ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಸೋಮವಾರ ಬಹುತೇಕ ಅಂಗಡಿ, ಮುಗ್ಗಟ್ಟುಗಳು ಬಂದ್ ಆಗಿದ್ದು ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚಾರ್‌ಮಿನಾರ್ ಬಳಿಯ ಶಾಹಾಲಿ ಬಂಡಾ ಎಂಬಲ್ಲಿ ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿದ ಪರಿಣಾಮ ಓರ್ವ ಪೊಲೀಸ್ ಕಾನ್‌ಸ್ಟೇಬಲ್ ಗಾಯಗೊಂಡಿದ್ದು ಆರು ಪೊಲೀಸ್ ವಾಹನಗಳು ಜಖಂಗೊಂಡಿವೆ. ಕೆಲ ಅಂಗಡಿಗಳಿಗೂ ಹಾನಿಯಾಗಿದೆ.

ಯಥಾಸ್ಥಿತಿಗೆ ಆದೇಶ: ಈ ನಡುವೆ ದೇವಸ್ಥಾನದ ಜಾಗದಲ್ಲಿ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳದಂತೆ ಯಥಾಸ್ಥಿತಿ ಕಾಪಾಡಿಕೊಂಡು ಹೋಗಲು ಆಂಧ್ರಪ್ರದೇಶ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ.ಸಿ. ಘೋಷ್ ನೇತೃತ್ವದ ಪೀಠ ಸೋಮವಾರ ಆದೇಶ ನೀಡಿದೆ. ನಾಲ್ಕು ವಾರಗಳ ನಂತರ ಕೋರ್ಟ್ ಮತ್ತೆ ಈ ಸಂಬಂಧ ವಿಚಾರಣೆ ನಡೆಸುವುದು.

ನಿರ್ಮಾಣ ಕಾರ್ಯ ಕೈಗೊಂಡಲ್ಲಿ 400 ವರ್ಷಗಳಷ್ಟು ಪುರಾತನ ಸ್ಮಾರಕ ಚಾರ್‌ಮೀನಾರ್ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಹಾಗಾಗಿ ಈ ಜಾಗದಲ್ಲಿ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳಬಾರದು ಎಂದು ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮಿನ್ (ಎಂಐಎಂ) ನ ಕಾರ್ಪೊರೇಟರುಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಆದರೆ ಈ ಅರ್ಜಿಯನ್ನು ಭಾಗ್ಯಲಕ್ಷ್ಮಿ ದೇವಸ್ಥಾನ ಸಮಿತಿ, ವಿಶ್ವ ಹಿಂದು ಪರಿಷತ್ ಹಾಗೂ ಇತರ ಸಂಘಟನೆಗಳು ವಿರೋಧಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.