ADVERTISEMENT

ಹೈದರಾಬಾದ್: ದಶಲಕ್ಷ ರ್ಯಾಲಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 18:30 IST
Last Updated 10 ಮಾರ್ಚ್ 2011, 18:30 IST
ಹೈದರಾಬಾದ್: ದಶಲಕ್ಷ ರ್ಯಾಲಿಗೆ ಯತ್ನ
ಹೈದರಾಬಾದ್: ದಶಲಕ್ಷ ರ್ಯಾಲಿಗೆ ಯತ್ನ   

ಹೈದರಾಬಾದ್ (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಆಗ್ರಹಿಸಿ ಇಲ್ಲಿನ ಹುಸೇನ್ ಸಾಗರ್ ಸರೋವರದ ದಂಡೆಯಲ್ಲಿ ಗುರುವಾರ ‘ಹೈದರಾಬಾದ್‌ನತ್ತ ದಶಲಕ್ಷ ಜನರ ರ್ಯಾಲಿ’ ಅಭಿಯಾನದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ತೆಲಂಗಾಣ ಭಾಗದ ತೆಲುಗು ದೇಶಂ, ಟಿಆರ್‌ಎಸ್ ಮತ್ತು ಬಿಜೆಪಿ ನಾಯಕರನ್ನು ಬಂಧಿಸಲಾಯಿತು. ಮತ್ತೊಂದೆಡೆ ರ್ಯಾಲಿ ನಿಮಿತ್ತ 47ಕ್ಕೂ ಅಧಿಕ ರೈಲುಗಳ ಸಂಚಾರ ರದ್ದುಪಡಿಸಿದ್ದರಿಂದ ರಾಜಧಾನಿಯಲ್ಲಿ ಜನಜೀವನ ಅಸ್ತವ್ಯಸ್ತವಾಯಿತು.

ಮಧ್ಯಾಹ್ನ 1 ಗಂಟೆಯಿಂದ 4 ಗಂಟೆ ನಡುವೆ ನಡೆಸಲು ಉದ್ದೇಶಿಸಿದ್ದ ಈ ರ್ಯಾಲಿಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಹೀಗಾಗಿ ಮೊದಲಾಗಿ ಪೊಲೀಸರು ಟಿಆರ್‌ಎಸ್ ಶಾಸಕರನ್ನು ಬಂಧಿಸಿದರು. ಬಳಿಕ ರ್ಯಾಲಿ ಸ್ಥಳದತ್ತ ತೆರಳುತ್ತಿದ್ದ ಟಿಡಿಪಿ ಶಾಸಕ ಇ.ದಯಾಕರ್ ರಾವ್, ಹಿರಿಯ ಬಿಜೆಪಿ ನಾಯಕ ಚ.ವಿದ್ಯಾಸಾಗರ ರಾವ್ ಮತ್ತು ಇತರರನ್ನೂ ಬಂಧಿಸಲಾಯಿತು. ತೆಲಂಗಾಣ ಜಂಟಿ ಕ್ರಿಯಾ ಸಮಿತಿಯ (ಟಿಜೆಎಸಿ) ಸಂಚಾಲಕ ಎಂ.ಕೋದಂಡರಾಮ್ ಅವರನ್ನೂ ಅವರ ಕಚೇರಿಯಿಂದ ಬಂಧಿಸಲಾಯಿತು.

ನಿಷೇಧಾಜ್ಞೆ ಉಲ್ಲಂಘಿಸಿಯೂ ಸಾವಿರಾರು ಜನರು ಕೆರೆಯ ದಂಡೆಯ ಮೇಲೆ ಜಮಾಯಿಸಿದರು. ರ್ಯಾಲಿಗೆ ಜನರು ಬರದಂತೆ ತಡೆಯುವ ಉದ್ದೇಶದಿಂದ 47 ರೈಲುಗಳು, ಹಲವು ಬಸ್ಸುಗಳ ಓಡಾಟವನ್ನು ಸ್ಥಗಿತಗೊಳಿಸಲಾಯಿತು.ಸ್ಥಳೀಯ ರೈಲು ಸಂಚಾರ ಸಹ ರದ್ದಾಯಿತು. ಇದರಿಂದ ಹೈದರಾಬಾದ್‌ಗೆ ಬರಬೇಕಿದ್ದ ಸಾವಿರಾರು ಮಂದಿ ತೀವ್ರ ಸಂಕಷ್ಟಕ್ಕೆ ಒಳಗಾದರು. ಪರೀಕ್ಷೆಗೆ ಹೋಗಲು ವಿದ್ಯಾರ್ಥಿಗಳು ಹರಸಾಹಸ ಮಾಡಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.