
ನವದೆಹಲಿ: ರಿಲಯನ್ಸ್ ಅನಿಲ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್, ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಅನಿಲ ಬೆಲೆ ಇಳಿಸುವಿರಾ? ಎಂದು ಸವಾಲು ಹಾಕಿದ್ದಾರೆ.
ಪಕ್ಷದ ಪ್ರಧಾನಿ ಅಭ್ಯರ್ಥಿಯಾದರೂ ಅನಿಲ ಬೆಲೆ ಕುರಿತು ಇಲ್ಲಿಯವರೆಗೂ ಚಕಾರ ಎತ್ತದೆ ಮೌನವಾಗಿರುವುದು ಏಕೆ ಎಂದು ಅವರು ಸಂದೇಹ ವ್ಯಕ್ತಪಡಿಸಿದ್ದಾರೆ.
‘ಒಂದು ವೇಳೆ ಅಧಿಕಾರಕ್ಕೆ ಬಂದಲ್ಲಿ ಅಂಬಾನಿಗೆ ನೀಡುವ ಪ್ರತಿ ಯೂನಿಟ್ ಅನಿಲ ಬೆಲೆಯನ್ನು 480 ರೂಪಾಯಿಯಿಂದ 240 ರೂಪಾಯಿಗೆ ಇಳಿಸುವಿರಾ ಎನ್ನುವುದನ್ನು ಈ ದೇಶದ ಜನ ತಿಳಿಯಬಯಸುತ್ತಾರೆ’ ಎಂದು ಮೋದಿಗೆ ಬರೆದ ಪತ್ರವನ್ನು ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಓದಿ ಹೇಳಿದರು.
ಅಂಬಾನಿ ಪೂರೈಸುತ್ತಿರುವ ಅನಿಲ ಬೆಲೆ ಏರಿಕೆ ಬಗ್ಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವಾಗಲಿ ಅಥವಾ ವಿರೋಧ ಪಕ್ಷವಾದ ಬಿಜೆಪಿಯಾಗಲಿ ಚಕಾರ ಎತ್ತದೆ ಮೌನವಹಿಸಿರುವುದು ಸಂದೇಹಕ್ಕೆ ಎಡೆ ಮಾಡಿಕೊಡುತ್ತದೆ. ರಿಲಯನ್ಸ್ ಕಂಪೆನಿಯ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಜೊತೆಗೆ ಎರಡೂ ಪಕ್ಷಗಳು ಹೊಂದಿರುವ ಸಖ್ಯ ಇದಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಅಪವಿತ್ರ ಮೈತ್ರಿ?: ಬಿಜೆಪಿಯ ಚುನಾವಣೆಗೆ ಮಾಡುತ್ತಿರುವ ವೆಚ್ಚ ಮತ್ತು ಆ ವೆಚ್ಚ ಭರಿಸಿದ ವ್ಯಕ್ತಿಗಳ ವಿವರಗಳನ್ನು ಬಹಿರಂಗ ಪಡಿಸುವಂತೆ ಕೇಜ್ರಿವಾಲ್ ಇದೇ ವೇಳೆ ಒತ್ತಾಯಿಸಿದ್ದಾರೆ.
‘ಪ್ರತಿ ಭಾಷಣದಲ್ಲೂ ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ಮರಳಿ ತರುವುದಾಗಿ ಹೇಳುತ್ತೀರಿ. ಆದರೆ, ಸ್ವಿಸ್ ಬ್ಯಾಂಕ್‌ನಲ್ಲಿರುವ ಬಹುತೇಕ ಹಣ ನಿಮ್ಮ ಪಕ್ಷಕ್ಕೆ ಯಥೇಚ್ಛ ದೇಣಿಗೆ ನೀಡುತ್ತಿರುವ ನಿಮ್ಮ ಪರಮಾಪ್ತ ಸ್ನೇಹಿತ ಅಂಬಾನಿ ಅವರಿಗೆ ಸೇರಿದ್ದು. ಈ ಸತ್ಯ ಗೊತ್ತಿದ್ದರೂ ಕೂಡ ನೀವು ಸ್ವಿಸ್ ಬ್ಯಾಂಕ್ ಹಣವನ್ನು ಮರಳಿ ತರುವಿರಾ?’ ಎಂದು ಕೆಣಕ್ಕಿದ್ದಾರೆ.
ಆಮ್ ಆದ್ಮಿ ಪಕ್ಷ ಅಂಬಾನಿ ಸಹೋದರರಿಂದ ನಯಾ ಪೈಸೆಯನ್ನೂ ಪಡೆದಿಲ್ಲ ಎಂದು ತಿಳಿಸಿದ ಅವರು, ಅಡುಗೆ ಅನಿಲ ಬೆಲೆ ಏರಿಕೆ ಕುರಿತಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಪತ್ರ ಬರೆಯುವುದಾಗಿ ತಿಳಿಸಿದರು.
ಆಮ್ ಆದ್ಮಿ ಪಕ್ಷ ಜನಸಾಮಾನ್ಯರ ಸಮಸ್ಯೆಗಳಾದ ಅಡುಗೆ ಅನಿಲ ಬೆಲೆ ಏರಿಕೆ, ಹಣದುಬ್ಬರದಂತಹ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಬಯಸುತ್ತದೆಯೇ ಹೊರತು ಧರ್ಮವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಬಯಸುವುದಿಲ್ಲ ಎಂದು ಅವರು ಬಿಜೆಪಿ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದರು.
ರಾಹುಲ್–ಮೋದಿ ಬಳಸುವ ಹೆಲಿಕಾಪ್ಟರ್ ಯಾರದ್ದು?
‘ದೇಶ, ವಿದೇಶ ಪ್ರವಾಸ ಮತ್ತು ಚುನಾವಣಾ ರ್‍ಯಾಲಿಗಳಿಗೆ ರಾಹುಲ್ ಮತ್ತು ನೀವು ಪುಕ್ಕಟೆಯಾಗಿ ಬಳಸುವ ಹೆಲಿಕಾಪ್ಟರ್ ಮತ್ತು ಖಾಸಗಿ ವಿಮಾನಗಳ ಕೋಟ್ಯಂತರ ರೂಪಾಯಿ ಬಾಡಿಗೆ ವೆಚ್ಚವನ್ನು ಯಾರು ಭರಿಸುತ್ತಾರೆ? ಮಾಧ್ಯಮಗಳ ವರದಿಗಳ ಪ್ರಕಾರ ರಾಹುಲ್ ಮತ್ತು ನೀವು ಅಂಬಾನಿ ಅವರಿಗೆ ಸೇರಿದ ಹೆಲಿಕಾಪ್ಟರ್ ಮತ್ತು ವಿಮಾನಗಳನ್ನು ಬಳಸುತ್ತೀರಿ ತಾನೆ?’ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
‘ನಿಮ್ಮ ಚುನಾವಣಾ ಪ್ರಚಾರಸಭೆಗಳು ಮತ್ತು ರ್‍ಯಾಲಿಗಳಿಗೆ ನೀರಿನಂತೆ ಹರಿಸುತ್ತಿರುವ ಹಣ ಯಾರದ್ದು? ಅದು ಅಂಬಾನಿ ಅವರದ್ದು ತಾನೆ?’ ಎಂದು ಅವರು ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.