ADVERTISEMENT

‘ಆದರ್ಶ’ ವರದಿಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 19:30 IST
Last Updated 2 ಜನವರಿ 2014, 19:30 IST

ಮುಂಬೈ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಒತ್ತಡಕ್ಕೆ ಮಣಿದಿರುವ ಮಹಾರಾಷ್ಟ್ರ ಸರ್ಕಾರ ಆದರ್ಶ ವಸತಿ ಹಗರಣದ ನ್ಯಾಯಾಂಗ ತನಿಖೆ ವರದಿಯನ್ನು ಆಂಶಿಕವಾಗಿ ಒಪ್ಪಿಕೊಂಡಿದೆ.

‘ರಾಜಕೀಯ ಪೋಷಣೆ ಇತ್ತು’ ಎಂಬುದನ್ನು ವರದಿ ಹೇಳಿದೆ. ಆದರೆ ಪ್ರಕರಣದಲ್ಲಿ ಹೆಸರಿಸಲಾಗಿರುವ ರಾಜಕಾರಣಿಗಳ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ಸಲ್ಲಿಸಲಾಗಿಲ್ಲ ಎಂದು  ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌ ಹೇಳಿದ್ದಾರೆ.

‘ಆರಂಭದಲ್ಲಿ ಸಚಿವ ಸಂಪುಟ ವರದಿಯ ಕೆಲವು ಭಾಗಗಳನ್ನು ತಿರಸ್ಕರಿಸಿದ್ದು ಹೌದು. ಆದರೆ ನಂತರ ಜನರ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಕ್ರಮ ಕೈಗೊಂಡ ವರದಿ ಅಧ್ಯಯನ ನಡೆಸಿ ಮುಂದಿನ ಕ್ರಮದ ಬಗ್ಗೆ ಪರಿಶೀಲನೆ ನಡೆಸಲು ಸಮಿತಿ ರಚಿಸಲು ತೀರ್ಮಾನಿಸಲಾಗಿದೆ’ ಎಂದು ಚವಾಣ್‌ ತಿಳಿಸಿದರು.

‘ಅಧಿಕಾರದಲ್ಲಿದ್ದವರು ದುರಾಸೆ, ಸ್ವಜನ ಪಕ್ಷಪಾತಗಳ ಮೂಲಕ ಕಾನೂನನ್ನು ತಿರುಚಿ ಅತ್ಯಂತ ಕೆಟ್ಟ ಪೂರ್ವನಿದರ್ಶನ ಉಂಟು ಮಾಡಿದ್ದಾರೆ’ ಎಂದು ಆಯೋಗ ತನ್ನ ವರದಿಯಲ್ಲಿ ಹೇಳಿತ್ತು.

ಮಾಜಿ ಮುಖ್ಯಮಂತ್ರಿಗಳಾದ ಅಶೋಕ್‌ ಚವಾಣ್‌, ವಿಲಾಸ್‌ರಾವ್‌ ದೇಶಮುಖ್‌, ಸುಶೀಲ್‌ ಕುಮಾರ್‌ ಶಿಂಧೆ ಮತ್ತು ಶಿವಾಜಿರಾವ್‌ ನಿಲಂಗೇಕರ್‌ ಪಾಟೀಲ್‌ ಮತ್ತು 12 ಹಿರಿಯ ಅಧಿಕಾರಿಗಳ ವಿರುದ್ಧ ವರದಿ ಆರೋಪ ಹೊರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.