ADVERTISEMENT

‘ಕೈ’ ಬಲಕ್ಕೆ ಮಂತ್ರಿ ರಾಜೀನಾಮೆ

ಲೋಕಸಭೆ ಮಹಾಸಮರಕ್ಕೆ ಕಾಂಗ್ರೆಸ್‌ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 19:30 IST
Last Updated 21 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ಮುಂಬರುವ ಲೋಕಸಭೆ ಚುನಾವಣೆಗಾಗಿ ಪಕ್ಷ ಸಂಘಟನೆ ಮತ್ತು ಬಲವರ್ಧನೆ ಕೆಲಸ­ದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಹಾಯಕ ಸಚಿವೆ ಜಯಂತಿ ನಟರಾ­ಜನ್‌ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ  ನೀಡಿದ್ದಾರೆ.

ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ.

ಪರಿಸರ ಮತ್ತು ಅರಣ್ಯ ಖಾತೆಯ ಹೆಚ್ಚುವರಿ ಜವಾಬ್ದಾರಿಯನ್ನು ಪೆಟ್ರೋ­ಲಿ­ಯಂ ಖಾತೆ ಸಚಿವ ಎಂ.ವೀರಪ್ಪ ಮೊಯಿಲಿ ಅವರಿಗೆ ವಹಿಸಲಾಗಿದೆ.
ಪಕ್ಷವು ಮತ್ತಷ್ಟು ಸಚಿವರನ್ನು  ಸಂಘ­ಟ­ನೆಗಾಗಿ ಬಳಸಿ­ಕೊಳ್ಳುವ ಇಂಗಿತ ಹೊಂದಿದ್ದು, ಇನ್ನೂ ಕೆಲವು ಸಂಪುಟ  ಸದಸ್ಯರು  ರಾಜೀನಾಮೆ ನೀಡುವ ನಿರೀಕ್ಷೆ ಇದೆ.

ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್‌, ಕಾರ್ಪೊರೇಟ್‌ ವ್ಯವಹಾರ­ಗಳ  ಸಚಿವ ಸಚಿನ್‌ ಪೈಲಟ್, ರಕ್ಷಣಾ ಖಾತೆ ರಾಜ್ಯ ಸಚಿವ ಜಿತೇಂದರ್‌ ಸಿಂಗ್‌ ಭಂವಾರ್ ಅವರೂ ಶೀಘ್ರ ರಾಜೀನಾಮೆ ಸಲ್ಲಿಸಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊ­ಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯುವ ಸಚಿವರಾದ ಜೋತ್ಯಿರಾದಿತ್ಯ ಸಿಂಧಿಯಾ ಹಾಗೂ ಆರ್‌ಪಿಎನ್‌ ಸಿಂಗ್‌ ಅವರನ್ನು  ಕ್ರಮವಾಗಿ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಪಕ್ಷ ಬಲ­ವರ್ಧನೆಗೆ  ಬಳಸಿಕೊಳ್ಳುವ ಉದ್ದೇಶ ಪಕ್ಷಕ್ಕಿದ್ದು  ಪ್ರಮುಖ ಹುದ್ದೆ­ಗಳು ನೀಡ­ಲಾ­ಗುವುದು ಎಂದು ವಿಶ್ಲೇಷಿಸಲಾಗುತ್ತಿದೆ.

ಮುಂಬರುವ ಲೋಕಸಭೆ ಚುನಾವಣೆಗೆ ಈಗಿನಿಂಲೇ ಸಿದ್ಧತೆ ನಡೆಸಲು ಎಐಸಿಸಿಯ ಪುನರ್‌ ರಚನೆಗೂ ಹೈಕಮಾಂಡ್‌ ಚಿಂತನೆ ನಡೆಸಿದ್ದು, ಕೆಲವು ಪ್ರಧಾನ ಕಾರ್ಯದರ್ಶಿಗಳನ್ನು ಕೈಬಿಡುವ ಸಾಧ್ಯತೆ ಕಾಣುತ್ತಿವೆ.

ರಾಜಸ್ತಾನ ವಿಧಾನಸಭಾ ಚುನಾ­ವಣೆಯಲ್ಲಿ ಪಕ್ಷದ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್‌, ಸಚಿನ್‌ ಪೈಲಟ್‌ ಅವರನ್ನು ರಾಜಸ್ತಾನ ಪ್ರದೇಶ  ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನದಲ್ಲಿ ತಂದು ಕೂರಿಸುವ ಉದ್ದೇಶ ಹೊಂದಿದೆ ಎನ್ನಲಾಗುತ್ತಿದೆ.

ರಾಹುಲ್‌ ಗಾಂಧಿ ಅವರಿಗೆ ಆಪ್ತರಾಗಿರುವ ಜಿತೇಂದರ್‌ ಸಿಂಗ್‌ ಭಂವಾರ್‌ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡುವ ಸಾಧ್ಯತೆ ಇದೆ.  ಸಚಿವರಾಗುವ ಮೊದಲು  ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ­ಯಾಗಿದ್ದರು. ಜನವರಿ 17ರಂದು ನಡೆಯಲಿರುವ ಎಐಸಿಸಿ ಸಭೆಯಲ್ಲಿ ಕಾಂಗ್ರೆಸ್‌ ತನ್ನ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡುವ ನಿರೀಕ್ಷೆ ಇದೆ.

ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಸೋಲಿನಿಂದ ಕಂಗೆಟ್ಟಿರುವ  ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಹೊಸ ವೇದಿಕೆ ಸಿದ್ಧವಾಗುತ್ತಿದೆ. ಇದರ ಮೊದಲ ಹಂತವಾಗಿಯೇ ದೆಹಲಿ ಗೋವಾ ಮತ್ತು ಛತ್ತೀಸಗಡಕ್ಕೆ ಹೊಸದಾಗಿ ಪಿಸಿಸಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭಾರಿ ಬದಲಾವಣೆಗಳಾಗುವ ಸೂಚನೆಗಳಿವೆ.

ಮುಂದಿನ ಸರದಿ
ಜೈರಾಂ ರಮೇಶ್‌,  ಸಚಿನ್‌ ಪೈಲಟ್, ಜಿತೇಂದರ್‌ ಸಿಂಗ್‌ ಭಂವಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.