
ನವದೆಹಲಿ (ಪಿಟಿಐ): ‘ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರು ‘ಝೆಡ್’ ಶ್ರೇಣಿಯ ಭದ್ರತೆ ಪಡೆಯಲು ಸಮ್ಮತಿ ಸೂಚಿಸಿದ್ದಾರೆ’ ಎಂಬ ಮಾಧ್ಯಮಗಳ ವರದಿಯಿಂದ ಕೇಜ್ರಿವಾಲ್ ತೀವ್ರ ಸಿಡಿಮಿಡಿಗೊಂಡಿದ್ದಾರೆ.
ಝೆಡ್ ಶ್ರೇಣಿಯ ಭದ್ರತೆ ಬಗ್ಗೆ ಮಾಧ್ಯಮಗಳ ವರದಿಯನ್ನು ತಳ್ಳಿ ಹಾಕಿರುವ ಅವರು, ‘ನನಗೆ ಯಾವ ರೀತಿಯ ಭದ್ರತೆಯೂ ಬೇಕಾಗಿಲ್ಲ‘ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
‘ಈ ಮೊದಲೇ ಅನೇಕ ಬಾರಿ ನಾನು ಭದ್ರತೆ ತಿರಸ್ಕರಿಸಿದ ಬಗ್ಗೆ ಸ್ಪಷ್ಟಪಡಿಸಿದ್ದೇನೆ. ಆದರೂ, ಮಾಧ್ಯಮಗಳು ಪದೇ ಪದೇ ನಾನು ಝೆಡ್ ಶ್ರೇಣಿಯ ಭದ್ರತೆ ಪಡೆದಿರುವುದಾಗಿ ವರದಿ ಮಾಡುತ್ತಿವೆ. ಇದು ಸಂಪೂರ್ಣ ಸುಳ್ಳು. ಅವರ ಬಳಿ ಈ ಬಗ್ಗೆ ಸೂಕ್ತ ದಾಖಲೆಗಳಿದ್ದರೆ ತಂದು ತೋರಿಸಲಿ’ ಎಂದು ಕೇಜ್ರಿವಾಲ್ ಸವಾಲು ಹಾಕಿದರು.
‘ನನಗೆ ಯಾವುದೇ ರೀತಿಯ ಭದ್ರತೆಯ ಅಗತ್ಯವಿಲ್ಲ. ದೇವರೇ ನನ್ನ ಬಹು ದೊಡ್ಡ ರಕ್ಷಕ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ನನಗೆ ಝೆಡ್ ಶ್ರೇಣಿಯ ಭದ್ರತೆ ನೀಡಲಾಗಿದೆ ಎಂದು ಮಾಧ್ಯಮದ ಒಂದು ಗುಂಪು ಸದಾ ನನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ’ ಎಂದು ಕೇಜ್ರಿವಾಲ್ ಆರೋಪಿಸಿದರು.
ಪ್ರತಿಭಟನೆ: ಭಾನುವಾರ ಕೇಜ್ರಿವಾಲ್ ಅವರ ತಿಲಕ್ ಲೇನ್ ನಿವಾಸದ ಎದುರು ಪಕ್ಷದ ಅತೃಪ್ತ ಕಾರ್ಯಕರ್ತರ ಗುಂಪೊಂದು ಪ್ರತಿಭಟನೆ ನಡೆಸಿತು.
ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ಕುರಿತು ತಮ್ಮ ಅಸಮಾಧಾನ ತಿಳಿಸಲು ತಾವು ಇಲ್ಲಿಗೆ ಬಂದಿದ್ದು, ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ಕಾರ್ಯಕರ್ತರು ತಿಳಿಸಿದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಗುಲಿದ ವೆಚ್ಚವೆಷ್ಟು?
ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಗುಲಿದ ವೆಚ್ಚವೆಷ್ಟು?
–ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆಯಲಾದ ದಾಖಲೆಗಳು ಈ ಬಗ್ಗೆ ಮಾಹಿತಿ ನೀಡಿವೆ.
ರಾಮ್‌ಲೀಲಾ ಮೈದಾನದಲ್ಲಿ ನಡೆದ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ₨ 6.33 ಲಕ್ಷ ಮತ್ತು ಅದರ ಪ್ರಚಾರಕ್ಕೆ ₨ 6.7 ಲಕ್ಷ ಸೇರಿದಂತೆ ದೆಹಲಿ ಸರ್ಕಾರ ಒಟ್ಟು ಈ ಸಮಾರಂಭಕ್ಕಾಗಿ ₨ 13.41 ಲಕ್ಷ ಖರ್ಚು ಮಾಡಿದೆ.
ಸಾರಿಗೆ, ನೀರು ಪೂರೈಕೆ ಸೇರಿದಂತೆ ಇನ್ನಿತರ ಖರ್ಚು, ವೆಚ್ಚಗಳನ್ನು ಇದು ಒಳಗೊಂಡಿಲ್ಲ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.