ADVERTISEMENT

ಅಯ್ಯಪ್ಪನ ಕೃಪೆ ನಮ್ಮ ಮೇಲಿದೆ: ಮುಖ್ಯ ತಂತ್ರಿ ಕಂಟರರ್ ರಾಜೀವರ್

ಹಿಂದಿನ ತೀರ್ಪಿಗೆ ತಡೆಯಿಲ್ಲ * ಈಗಲೂ ಮಹಿಳೆಯರು ದೇಗುಲ ಪ್ರವೇಶಿಸಬಹುದು

ಏಜೆನ್ಸೀಸ್
Published 14 ನವೆಂಬರ್ 2018, 3:48 IST
Last Updated 14 ನವೆಂಬರ್ 2018, 3:48 IST
ಶಬರಿಮಲೆ ದೇವಸ್ಥಾನ
ಶಬರಿಮಲೆ ದೇವಸ್ಥಾನ   

‘ಅಯ್ಯಪ್ಪನ ಕೃಪೆ ನಮ್ಮ ಮೇಲಿದೆ’–ಹೀಗೆಂದು ನಿಟ್ಟುಸಿರು ಬಿಟ್ಟದ್ದು ಶಬರಿಮಲೆ ದೇವಸ್ಥಾನದ ಮುಖ್ಯ ತಂತ್ರಿ ಕಂಟರರ್ ರಾಜೀವರ್.

ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಹೆಣ್ಣುಮಕ್ಕಳು ಹೋಗಬಹುದು ಎಂಬ ತನ್ನದೇ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂಕೋರ್ಟ್‌ ಒಪ್ಪಿಗೆ ಸೂಚಿಸಿರುವ ಸುದ್ದಿ ಶಬರಿಮಲೆ ದೇವಸ್ಥಾನದಲ್ಲಿ ಸಂಭ್ರಮದ ವಾತಾವರಣವನ್ನು ಸೃಷ್ಟಿಸಿದೆ.

ತೀರ್ಪಿನ ವಿರುದ್ಧ ಪ್ರತಿಭಟಿಸಿ ದೇವಸ್ಥಾನದ ಆಚರಣೆಗೆ ದಕ್ಕೆಯಾಗದಂತೆ ನೋಡಿಕೊಂಡ ಭಕ್ತರಿಗೆ ತಂತ್ರಿ ಕಂಟರರ್ ರಾಜೀವರ್ ಧನ್ಯವಾದ ಸಲ್ಲಿಸಿದರು.ಅಯ್ಯಪ್ಪನ ಭಕ್ತಾರು ಕೇರಳದ ವಿವಿಧ ಕಡೆಗಳಲ್ಲಿ ಮೆರವಣಿಗೆ ನಡೆಸಿ, ಸಿಹಿ ಹಂಚಿ ಸಂಭ್ರಮಿಸಿದರು.

ADVERTISEMENT

ಕೇರಳದ ಮುಜರಾಯಿ ಸಚಿವ ಕಡಗಂಪಳ್ಳಿ ಸುರೇಂದ್ರನ್‌, ‘ಸುಪ್ರೀಂಕೋರ್ಟ್‌ ಆದೇಶವನ್ನು ಪಾಲಿಸಬೇಕೆಂದು ನಮ್ಮ ಸರ್ಕಾರ ಬದ್ಧವಾಗಿತ್ತು. ಈಗಲೂ ಕೋರ್ಟ್‌ ಹೇಳುವ ಪ್ರಕಾರವೇ ಸರ್ಕಾರ ನಡೆದುಕೊಳ್ಳುತ್ತದೆ. ಆದರೆ, ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಈ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಿದವು’ ಎಂದು ಹೇಳಿದರು.

ದೇವಾಲಯ ಪ್ರವೇಶದ ಕುರಿತು ಸುಪ್ರೀಂಕೋರ್ಟ್‌ ಈ ಹಿಂದೆ ನೀಡಿದ ತೀರ್ಪಿಗೆ ಯಾವುದೇ ತಡೆ ನೀಡಿಲ್ಲ. ಮರುಪರಿಶೀಲಿಸಲು ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಚಾರಣೆ ಮಾಡುವುದಾಗಿ ಅಷ್ಟೇ ಹೇಳಿದೆ. ಹಾಗಾಗಿ ಈಗಲೂ ಮಹಿಳೆಯರು ದೇವಾಲಯವನ್ನು ಪ್ರವೇಶಿಸಬಹುದು ಎಂದರು.

ಹೋರಾಟಗಾರ ರಾಹುಲ್‌ ಈಶ್ವರ್, ‘ಜನವರಿ 22ರವೆರೆಗೂ ನಿಗದಿತ ವಯೋಮಾನದ ಮಹಿಳೆಯರು ದೇವಾಲಯ ಪ್ರವೇಶಿಸದಂತೆ ನಾವು ಕಾವಲು ಕಾಯುತ್ತೇವೆ. ಜೊತೆಗೆ ಶಾಂತಿಯುತ ಪ್ರತಿಭಟನೆ ಮುಂದುವರಿಸುತ್ತೇವೆ. ಈಗಲಾದರೂ ಕೇರಳ ಸರ್ಕಾರ ಭಕ್ತರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತದೆ ಎಂದು ಭಾವಿಸುತ್ತೇನೆ’ ಎಂದರು.

ಸುಪ್ರೀಂಕೋರ್ಟ್‌ ನಿರ್ಧಾರವನ್ನು ಸ್ವಾಗತಿಸಿರುವ ಕೇರಳ ಕಾಂಗ್ರೆಸ್‌ ಘಟಕದ ಕಾರ್ಯದರ್ಶಿ ಕೆ. ಸುಧಾಕರನ್‌, ‘ನಾವು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿದ ನಂತರವಾದರೂ ಕೋರ್ಟ್‌ಗೆ ಭಕ್ತರ ಭಾವನೆ ಅರ್ಥವಾಗಲಿದೆ ಮತ್ತು ನಮ್ಮ ಪರವಾದ ತೀರ್ಪನ್ನು ನೀಡಲಿದೆ ಎಂಬ ವಿಶ್ವಾಸವನ್ನು ಹೊಂದಿದ್ದೇನೆ’ ಎಂದು ಹೇಳಿದರು.

ತೀರ್ಪಿನ ಮರುಪರಿಶೀಲಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ 48 ಅರ್ಜಿಗಳ ವಿಚಾರಣೆಯನ್ನು ಜನವರಿ 22ರಿಂದ ನಡೆಸಲಾಗುವುದು ಎಂದುಮುಖ್ಯ ನಾಯಮೂರ್ತಿ ರಂಜನ್‌ ಗೊಗೊಯಿ, ನ್ಯಾಯಮೂರ್ತಿಗಳಾದ ಆರ್‌.ಎಫ್‌. ನಾರಿಮನ್‌, ಎ.ಎಂ. ಖಾನ್ವಿಲ್ಕರ್‌, ಡಿ.ವೈ.ಚಂದ್ರಚೂಡ್‌ ಮತ್ತು ಇಂದು ಮಲ್ಹೋತ್ರ ಅವರಿದ್ದ ಪೀಠ ತೀರ್ಮಾನಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ 4:1ರ ಅನುಪಾತದಲ್ಲಿ (ಒಬ್ಬರು ನ್ಯಾಯಮೂರ್ತಿ ಭಿನ್ನ ತೀರ್ಪು ನೀಡಿದ್ದರು) ‘ಎಲ್ಲಾ ವಯೋಮಾದ ಮಹಿಳೆಯರು ಶಬರಿಮಲೆಯ ಅಯ್ಯಪ್ಪನ ದೇವಾಲಯ ಪ್ರವೇಶಿಸಬಹುದು’ ಎಂದು ತೀರ್ಪು ನೀಡಿತ್ತು. ಭಕ್ತರಿಂದ ಇದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿತ್ತು.

ಸುಪ್ರೀಂಕೋರ್ಟ್‌ನಲ್ಲಿಶಬರಿಮಲೆ ಪ್ರಕರಣ: ನೀವು ಓದಲೇಬೇಕಾದ 11 ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.