ADVERTISEMENT

ಮುಸಲ್ಮಾನರ ಗುರಿಯಾಗಿಸಿ ಕಿರುಕುಳ, ಆಕ್ರೋಶ

101 ಮಾಜಿ ಅಧಿಕಾರಿಗಳಿಂದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 19:45 IST
Last Updated 25 ಏಪ್ರಿಲ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ವಿವಿಧೆಡೆ ಮುಸಲ್ಮಾನರನ್ನು ಗುರಿಯಾಗಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸುಮಾರು 101 ಮಾಜಿ ಅಧಿಕಾರಿಗಳು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ದೆಹಲಿಯಲ್ಲಿ ಸಭೆ ಆಯೋಜಿಸಿದ್ದ ತಬ್ಲೀಗ್‌ ಜಮಾತ್‌ನ ನಡೆ ಖಂಡನಾರ್ಹ ಎಂದು ಹೇಳಿರುವ ಮಾಜಿ ಅಧಿಕಾರಿಗಳು, ಅದೇ ಸಂದರ್ಭದಲ್ಲಿ ಕೆಲ ಮಾಧ್ಯಮಗಳು ಮುಸ್ಲಿಂರ ವಿರುದ್ಧದ ಹಗೆತನ ಹೆಚ್ಚುವಂತೆ ನಡೆದುಕೊಳ್ಳುತ್ತಿರುವುದು ‘ಬೇಜವಾಬ್ದಾರಿಯುತ ಹಾಗೂ ಛೀಮಾರಿಗೆ ಸೂಕ್ತವಾದ ನಡೆಯಾಗಿದೆ’ ಎಂದು ಟೀಕಿಸಿದ್ದಾರೆ.

ಕೋವಿಡ್– 19 ಸೋಂಕು ಮೂಡಿಸಿರುವ ಭೀತಿಯಿಂದಾಗಿ, ಇತರೆ ಸಮುದಾಯಗಳನ್ನು ರಕ್ಷಿಸಲು ಮುಸ್ಲಿಂರನ್ನು ಸಾರ್ವಜನಿಕ ಸ್ಥಳದಿಂದ ದೂರವಿಡಬೇಕು ಎಂಬಂತೆ ಉದ್ದೇಶಪೂರ್ವಕವಾಗಿ ಬಿಂಬಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಇಡೀ ದೇಶ ಅನಿರೀಕ್ಷಿತ ಸಂಕಷ್ಟದಲ್ಲಿದೆ. ಈಗಿನ ಸವಾಲುಗಳಿಂದ ಹೊರಬರಲು ನಾವುಗಳು ಒಟ್ಟಾಗಿ, ಪರಸ್ಪರ ಸಹಕಾರದ ಮೂಲಕ ಹೋರಾಡಬೇಕಿದೆ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಕೇಂದ್ರ ಸೇವೆ ಮತ್ತು ಅಖಿಲ ಭಾರತ ಸೇವೆಯ ಈ 101 ಮಾಜಿ ಅಧಿಕಾರಿಗಳು, ‘ನಿರ್ದಿಷ್ಟವಾಗಿ ಒಂದು ರಾಜಕೀಯ ಪಕ್ಷದ ಚಿಂತನೆಗಳಿಗೆ ಜೋತುಬೀಳದೆ ಸಂವಿಧಾನಬದ್ಧ ನಿಲುವುಗಳಿಗೆ ಒತ್ತು ನೀಡುವುದು ಅಗತ್ಯವಾಗಿದೆ’ ಎಂದಿದ್ದಾರೆ.

ದೆಹಲಿಯ ತಬ್ಲೀಗ್ ಜಮಾತ್‌ನ ಸಭೆ ಬಳಿಕ ಮುಸ್ಲಿಂರನ್ನು ಗುರಿಯಾಗಿಸಿ ಕಿರುಕುಳ ನೀಡುತ್ತಿರುವ ವರದಿಗಳಿವೆ. ಇದು, ಕೇವಲ ಒಂದು ಸಭೆಯಾದರೂ ಇದನ್ನೇ ನೆಪವಾಗಿಸಿ ರಾಜಕೀಯ, ಧಾರ್ಮಿಕ ಮತ್ತು ಮಾಧ್ಯಮದ ಒಂದು ವರ್ಗ ಕೋವಿಡ್‌–19ಗೂ ಕೋಮುಬಣ್ಣ ಬಳಿಯಲು ಯತ್ನಿಸಿವೆ ಎಂದು ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂಬ ಸರ್ಕಾರದ ಸಲಹೆ ಅಲಕ್ಷಿಸಿ ಸಭೆ ನಡೆಸಿದ ತಬ್ಲೀಗ್‌ ಕ್ರಮ ಖಂಡನೀಯ. ಈ ಕುರಿತಂತೆ ಕೆಲ ಮಾಧ್ಯಮಗಳ ನಡೆಯೂ ಬೇಜವಾದ್ಧಾರಿಯುತ ನಿಲುವು ಎಂದು ಹೇಳಿದ್ದಾರೆ.

ಈ ಸ್ಥಿತಿಯಲ್ಲಿ ನಿರ್ದಿಷ್ಟವಾಗಿ ಒಂದು ಸಮುದಾಯಕ್ಕೆ ಬಹಿಷ್ಕಾರ ಹಾಕುವುದೂ ಸೇರಿ ಪ್ರತಿಕೂಲ ಬೆಳವಣಿಗೆಗಳನ್ನು ತಡೆಯುವಂತೆ ಅಧಿಕಾರಿಗಳಿಗೆ ನಿರ್ದೇಶಿಸಬೇಕು. ಈಗಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸುವಂತ ನಾಯಕತ್ವ ಬೇಕಾಗಿದೆ ಎಂದು ಮಾಜಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಸಂಪುಟ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್, ಮಾಜಿ ಐಪಿಎಸ್‌ ಅಧಿಕಾರಿಗಳಾದ ಎ.ಎಸ್.ದುಲಾತ್, ಜುಲಿಯೊ ರಿಬಿರಿಯೊ, ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬ್ ಉಲ್ಲಾ, ದೆಹಲಿಯ ಮಾಜಿ ಲೆಫ್ಟಿನಂಟ್ ಗವರ್ನರ್‌ ನಜೀಬ್ ಜಂಗ್ ಮತ್ತು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಅವರು ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.