ಮುಂಬೈ: ಈ ಮಗುವಿಗೆ 12 ಗಂಟೆ ಶಸ್ತ್ರಚಿಕಿತ್ಸೆ ನಡೆದಿತ್ತು. ಶಸ್ತ್ರಚಿಕಿತ್ಸೆಯ ಬಳಿಕ 6 ಬಾರಿ ಹೃದಯಾಘಾತವಾಗಿತ್ತು. ಆದರೂ ಪವಾಡದ ರೀತಿಯಲ್ಲಿ ಈ ಮಗು ಬದುಕುಳಿದಿದೆ. ಹೀಗಾಗಿ ಈ ಮಗುವಿಗೆ ವಿದಿಶಾ ಎಂಬ ಹೆಸರಿಗಿಂತ ‘ಪವಾಡದ ಮಗು’ ಎಂಬ ಹೆಸರೇ ಗಟ್ಟಿಯಾಗಿದೆ.
ಮುಂಬೈನ ಕಲ್ಯಾಣ್‌ನ ನಿವಾಸಿಗಳಾದ ವಿಶಾಖಾ ಮತ್ತು ವಿನೋದ್ ದಂಪತಿಯ ನಾಲ್ಕು ತಿಂಗಳ ಹೆಣ್ಣು ಮಗು ವಿದಿಶಾಗೆ ಸುಮಾರು ಎರಡು ತಿಂಗಳಿಂದ ಆಸ್ಪತ್ರೆಯೇ ಮನೆಯಾಗಿದೆ. 12 ಗಂಟೆಯ ಶಸ್ತ್ರಚಿಕಿತ್ಸೆ, 6 ಬಾರಿ ಹೃದಯಾಘಾತದ ಪ್ರಾಣಕಂಟಕಗಳನ್ನೂ ಮೀರಿ ವಿದಿಶಾ ವಿಧಿಯನ್ನು ಜಯಿಸಿದ್ದಾಳೆ!
ಸದ್ಯ ಮುಂಬೈನ ಬಿ.ಜೆ. ವಾಡಿಯ ಆಸ್ಪತ್ರೆಯಲ್ಲಿರುವ ವಿದಿಶಾ ಆರೋಗ್ಯ ಸುಧಾರಿಸುತ್ತಿದ್ದು ಕೆಲ ದಿನಗಳಲ್ಲಿ ಆಕೆ ಮನೆಗೆ ಮರಳಲಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
‘ವಿದಿಶಾಗೆ ಮಹಾ ಅಪಧಮನಿಯ ಸ್ಥಾನಪಲ್ಲಟದ ಸಮಸ್ಯೆ ಇತ್ತು. ಇದಕ್ಕಾಗಿ 12 ಗಂಟೆಯ ದೀರ್ಘ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ಶಸ್ತ್ರಚಿಕಿತ್ಸೆಯೇನೋ ಯಶಸ್ವಿಯಾಗಿತ್ತು. ಆದರೆ, ಮಗುವಿಗೆ ಹೃದಯದ ಸಮಸ್ಯೆಯ ಜತೆಗೆ ಶ್ವಾಸಕೋಶದ ಸಮಸ್ಯೆಯೂ ಇತ್ತು. ಶಸ್ತ್ರಚಿಕಿತ್ಸೆಯ ಬಳಿಕ ಮಗುವಿಗೆ 6 ಬಾರಿ ಹೃದಯಾಘಾತವಾಗಿತ್ತು’ ಎನ್ನುತ್ತಾರೆ ಬಿ.ಜೆ. ವಾಡಿಯ ಆಸ್ಪತ್ರೆಯ ವೈದ್ಯ ಡಾ. ಬಿಸ್ವಾ ಪಂಡ.
‘ಸಾಮಾನ್ಯ ಹೃದಯ ರಚನೆಗೂ ವಿದಿಶಾ ಹೃದಯದ ರಚನೆಗೂ ಬಹಳಷ್ಟು ವ್ಯತ್ಯಾಸವಿತ್ತು. ವಿದಿಶಾ ಹೃದಯದ ರಚನೆಯೇ ಭಿನ್ನವಾಗಿತ್ತು. ಅಪಧಮನಿ ಸ್ಥಾನಪಲ್ಲಟದಿಂದ ಮಗುವಿನ ರಕ್ತ ಪರಿಚಲನೆ ಕಷ್ಟವಾಗುತ್ತಿತ್ತು. ಇಂತಹ ಸಮಸ್ಯೆ ಇರುವ ಮಕ್ಕಳಿಗೆ ಹುಟ್ಟಿದ ಕೆಲ ಗಂಟೆಗಳಲ್ಲೇ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ. ಆದರೆ, ವಿದಿಶಾ ಶ್ವಾಸಕೋಶ ಸರಿಯಾಗಿ ಬೆಳವಣಿಗೆಯಾಗದಿದ್ದರಿಂದ ನಾವು ಶಸ್ತ್ರಚಿಕಿತ್ಸೆಗೆ ಅವಸರ ಮಾಡಲಿಲ್ಲ’ ಎನ್ನುತ್ತಾರೆ ಅವರು.
‘ವಿದಿಶಾ 45 ದಿನಗಳ ಮಗುವಾಗಿದ್ದಾಗ ಮೊದಲು ಆರೋಗ್ಯ ಸಮಸ್ಯೆ ಕಾಣಸಿಕೊಂಡಿತು. ಹಾಲು ಕುಡಿದಾಗ ವಾಂತಿ ಮಾಡಿಕೊಂಡು ಪ್ರಜ್ಞೆ ತಪ್ಪಿದ್ದಳು. ಗಾಬರಿಗೊಂಡ ನಾವು ಅವಳನ್ನು ಆಸ್ಪತ್ರೆಗೆ ದಾಖಲಿಸಿದೆವು. ಈಗ ಅವಳು ಆರೋಗ್ಯವಾಗಿದ್ದಾಳೆ’ ಎನ್ನುತ್ತಾರೆ ವಿದಿಶಾ ತಾಯಿ ವಿಶಾಖಾ.
ವಿದಿಶಾ ಚಿಕಿತ್ಸೆಯ ವೆಚ್ಚ ₹ 5 ಲಕ್ಷವಾಗಿತ್ತು. ವಿದಿಶಾ ಪೋಷಕರು ₹ 25 ಸಾವಿರ ಮಾತ್ರ ಭರಿಸಲು ಸಾಧ್ಯವಾಗಿತ್ತು. ಉಳಿದ ಮೊತ್ತವನ್ನು ದಾನಿಗಳು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.