ADVERTISEMENT

ರಾಜಸ್ಥಾನ: ಹಳಿ ತಪ್ಪಿದ ರೈಲು- 26 ಮಂದಿಗೆ ಗಾಯ

ಪಾಲಿ ಬಳಿ ಹಳಿ ತಪ್ಪಿದ ಸೂರ್ಯನಗರಿ ಎಕ್ಸ್‌ಪ್ರೆಸ್

ಪಿಟಿಐ
Published 2 ಜನವರಿ 2023, 11:02 IST
Last Updated 2 ಜನವರಿ 2023, 11:02 IST
 ರಾಜಸ್ಥಾನದ ಪಾಲಿ ಜಿಲ್ಲೆಯ ಬಳಿ ಸೂರ್ಯನಗರಿ ಎಕ್ಸ್‌ಪ್ರೆಸ್ ರೈಲು ಸೋಮವಾರ ಮುಂಜಾನೆ ಹಳಿತಪ್ಪಿದ ದೃಶ್ಯ – ಪಿಟಿಐ ಚಿತ್ರ 
 ರಾಜಸ್ಥಾನದ ಪಾಲಿ ಜಿಲ್ಲೆಯ ಬಳಿ ಸೂರ್ಯನಗರಿ ಎಕ್ಸ್‌ಪ್ರೆಸ್ ರೈಲು ಸೋಮವಾರ ಮುಂಜಾನೆ ಹಳಿತಪ್ಪಿದ ದೃಶ್ಯ – ಪಿಟಿಐ ಚಿತ್ರ    

ಜೈಪುರ: ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಬಾಂದ್ರಾ ಟರ್ಮಿನಸ್-ಜೋಧ್‌ಪುರ ಸೂರ್ಯನಗರಿ ಎಕ್ಸ್‌ಪ್ರೆಸ್ (12480) ರೈಲಿನ 13 ಬೋಗಿಗಳು ಹಳಿ ತಪ್ಪಿದ ಕಾರಣ 26 ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಯಾವುದೇ ಸಾವಿನ ವರದಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಬಾಂದ್ರಾ ಟರ್ಮಿನಸ್‌ನಿಂದ ಜೋಧಪುರಕ್ಕೆ ತೆರಳುತ್ತಿತ್ತು. ಮುಂಜಾನೆ 3.27ರ ವೇಳೆಗೆ ರೈಲು ಹಳಿತಪ್ಪಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಪಾಲಿಯ ಬಂಗಾಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ಮಾರ್ಗಗಳನ್ನು ಬದಲಿಸಲಾಗಿದ್ದರೆ, ಮತ್ತೆ ಕೆಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ವಾಯವ್ಯ ರೈಲ್ವೆ ವಿಭಾಗದ ವಕ್ತಾರರು ತಿಳಿಸಿದ್ದಾರೆ.

ಪ್ರಯಾಣಿಕರ ಸಹಾಯಕ್ಕಾಗಿ ರೈಲ್ವೆಯು ಸಹಾಯವಾಣಿಯನ್ನು ಆರಂಭಿಸಿದೆ. ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಪ್ರಯಾಣಿಕರಿಗೆ ಬಸ್ ಮತ್ತು ಪರ್ಯಾಯ ರೈಲಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ADVERTISEMENT

‘ಪ್ರಯಾಣಿಕರಿಗೆ ತುರ್ತು ನೆರವು ಹಾಗೂ ಸಕಾಲಿಕ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡಿವರಿಗೆ ತಲಾ ₹ 1ಲಕ್ಷ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ ₹ 25 ಸಾವಿರ ನೆರವು ನೀಡಲಾಗುವುದು’ ಎಂದು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.