ಉಮರಿಯಾ (ಮಧ್ಯಪ್ರದೇಶ): ನಗರದ 13 ವರ್ಷದ ಬಾಲಕಿಯ ಮೇಲೆ ಒಂಬತ್ತು ಮಂದಿ ಪ್ರತ್ಯೇಕ ಸಂದರ್ಭಗಳಲ್ಲಿ ಅತ್ಯಾಚಾರ ಎಸಗಿರುವ ಆರೋಪ ಸಂಬಂಧ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ.
ಈ ತಿಂಗಳ ಪ್ರಾರಂಭದಲ್ಲಿ ಎರಡು ಬಾರಿ ಬಾಲಕಿಯನ್ನು ಅಪಹರಿಸಿ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಬಾಲಕಿಯ ತಾಯಿ ಜನವರಿ 14 ರಂದು ಪೊಲೀಸರಿಗೆ ದೂರು ನೀಡಿದ್ದು, ಅದರ ಅನ್ವಯ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಇತರ ಇಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಬಾಲಕಿಗೆ ಪರಿಚಯವಿದ್ದ ಒಬ್ಬ ಆರೋಪಿ ಆಕೆಗೆ ಆಮಿಷವೊಡ್ಡಿ, ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ. ಈ ಸಂದರ್ಭ, ಆ ವ್ಯಕ್ತಿಯೂ ಸೇರಿದಂತೆ ಇತರ ಆರು ಮಂದಿ ಆಕೆಯ ಅತ್ಯಾಚಾರ ಎಸಗಿದ್ದರು. ನಡೆದ ಘಟನೆಯನ್ನು ಯಾರಿಗೂ ತಿಳಿಸದ್ದಂತೆ ಬೆದರಿಕೆವೊಡ್ಡಿ ಆಕೆಯನ್ನು ಮರುದಿನ ಆ ಸ್ಥಳದಿಂದ ಕಳುಹಿಸಿದ್ದರು. ಭಯಗೊಂಡಿದ್ದ ಬಾಲಕಿ ದೂರನ್ನು ನೀಡಿರಲಿಲ್ಲ.
‘ಜನವರಿ 11 ರಂದು ಬಾಲಕಿಯನ್ನು ಮತ್ತೊಮ್ಮೆ ಅಪಹರಿಸಲಾಗಿತ್ತು. ಹಿಂದೆ ಅತ್ಯಾಚಾರವೆಸಗಿದ ಮೂವರು ಆರೋಪಿಗಳು ಸೇರಿದಂತೆ ಇನ್ನಿಬ್ಬರು ಅಪರಿಚಿತ ಟ್ರಕ್ ಚಾಲಕರು ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದರು. ಸಂತ್ರಸ್ತೆಯ ಮನೆಯವರು ಜ.11 ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು’.
ಬಾಲಕಿ ಮನೆಗೆ ಬಂದಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.