ADVERTISEMENT

ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ, ಪ್ರವಾಹ: 14 ಜನರ ಸಾವು

ಪಿಟಿಐ
Published 3 ಆಗಸ್ಟ್ 2021, 9:21 IST
Last Updated 3 ಆಗಸ್ಟ್ 2021, 9:21 IST
ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಮತ್ತಿತರ ಭಾಗಗಳಲ್ಲಿ ಭಾರಿ ಮಳೆಯಿಂದ ಪ್ರವಾಹ ಎದುರಾಗಿದ್ದು, ಇಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ
ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಮತ್ತಿತರ ಭಾಗಗಳಲ್ಲಿ ಭಾರಿ ಮಳೆಯಿಂದ ಪ್ರವಾಹ ಎದುರಾಗಿದ್ದು, ಇಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ   

ಕೋಲ್ಕತ್ತ: ಪಶ್ಚಿಮ ಬಂಗಾಳದ ಆರು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸಂಭವಿಸಿದ ಗೋಡೆ ಕುಸಿತ, ವಿದ್ಯುತ್‌ ಸ್ಪರ್ಶದಿಂದ ಕನಿಷ್ಠ 14 ಜನರು ಮೃತಪಟ್ಟಿದ್ದಾರೆ.

ದಾಮೋದರ್‌ ವ್ಯಾಲಿ ಅಣೆಕಟ್ಟೆಯಿಂದ ಹೊರಬಿಡಲಾದ ಹೆಚ್ಚುವರಿ ನೀರಿನಿಂದ ಈ ಭಾಗದ ಹಲವು ರಸ್ತೆಗಳು, ಮನೆಗಳು ಜಲಾವೃತಗೊಂಡಿವೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಸುಮಾರು 2.5 ಲಕ್ಷ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಳೆದ ವಾರ ಆರಂಭವಾದ ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿವೆ ಎಂದು ಅವರು ಹೇಳಿದರು.

ADVERTISEMENT

ಪೂರ್ವ ವರ್ಧಮಾನ್‌, ಪಶ್ಚಿಮ ವರ್ಧಮಾನ್‌, ಪಶ್ಚಿಮ ಮೇದಿನಿಪುರ, ಹೂಗ್ಲಿ, ಹೌರಾ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳ ಹಲವಾರು ಪ್ರದೇಶಗಳಲ್ಲಿ ಸೊಂಟದ ಮಟ್ಟದವರೆಗೆ ನೀರು ಆವರಿಸಿದೆ. ಇಲ್ಲಿ ಜನರು ತಮ್ಮ ಮೂಲಭೂತ ಅಗತ್ಯಗಳನ್ನು ಪಡೆಯಲು ಪರದಾಡುವಂತಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ಒಂದು ಲಕ್ಷ ಟಾರ್ಪಾಲು, 1,000 ಟನ್‌ ಅಕ್ಕಿ ಪೂರೈಸಲಾಗಿದೆ. ಅಗತ್ಯ ಪ್ರಮಾಣದ ಕುಡಿಯುವ ನೀರು ಮತ್ತು ಬಟ್ಟೆಗಳನ್ನು ಒದಗಿಸಲಾಗಿದೆ.

‘ಪ್ರವಾಹದಿಂದ ಜೀವ ಕಳೆದುಕೊಂಡ 14 ಜನರ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ. ಈ ಕುರಿತು ಜಿಲ್ಲಾಡಳಿತಗಳಿಂದ ಬರಲಿರುವ ವರದಿಯ ನಿರೀಕ್ಷೆಯಲ್ಲಿದ್ದೇವೆ’ ಎಂದು ಅವರು ತಿಳಿಸಿದರು.

ಹೂಗ್ಲಿ ಜಿಲ್ಲೆಯಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೋಮವಾರ ಸೇನೆ ಮತ್ತು ವಾಯುಪಡೆ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.