ನವದೆಹಲಿ: ರಿಶಾಂತ್ ಎಂಬ 16 ತಿಂಗಳ ಮಗುವೊಂದು ಅಂಗಾಂಗ ದಾನದ ಮೂಲಕ ಇಬ್ಬರ ಜೀವ ಉಳಿಸಿದೆ!
ಬಿದ್ದು ಮಾರಣಾಂತಿಕ ಗಾಯಗೊಂಡಿದ್ದ ಮಗುವನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಗುವಿನ ಮಿದುಳು ನಿಷ್ಕ್ರಿಯಗೊಂಡಿದೆ (ಬ್ರೈನ್ ಡೆಡ್) ಎಂದು ವೈದ್ಯರು ಘೋಷಿಸಿದರು. ಹೀಗಾಗಿ ಆ ಮಗುವಿನ ಅಂಗಾಂಗ ದಾನ ಮಾಡಲಾಗಿದೆ.
ವೈದ್ಯರ ಪ್ರಕಾರ, ಏಮ್ಸ್‌ನಲ್ಲಿ ಈವರೆಗೆ ಅಂಗಾಂಗ ದಾನ ಮಾಡಿದ ಅತಿ ಕಿರಿಯ ದಾನಿಯಾಗಿದ್ದಾನೆ ರಿಶಾಂತ್.
ಮಗುವಿನ ಕಿಡ್ನಿ, ಲಿವರ್ ಅನ್ನು ಇಬ್ಬರು ಮಕ್ಕಳಿಗೆ ಕಸಿ ಮಾಡಲಾಗಿದೆ. ಹೃದಯ ಕವಾಟಗಳು ಮತ್ತು ಕಾರ್ನಿಯಾಗಳನ್ನು ಸಂರಕ್ಷಿಸಿ ಇಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ದೆಹಲಿಯ ಖಾಸಗಿ ಗುತ್ತಿಗೆದಾರ ಉಪಿಂದರ್ ಎಂಬವರ ಮಗು ರಿಶಾಂತ್‌ಗೆ ಆಗಸ್ಟ್ 17ರಂದು ಬಿದ್ದು ತಲೆಗೆ ಮಾರಣಾಂತಿಕ ಏಟಾಗಿತ್ತು. ಮಗುವನ್ನು ಜಮುನಾ ಪಾರ್ಕ್ ಪ್ರದೇಶದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಅದೇ ದಿನ ಏಮ್ಸ್‌ನ ಜಯಪ್ರಕಾಶ್ ನಾರಾಯಣ್ ಟ್ರಾಮಾ ಸೆಂಟರ್‌ಗೆ ಕಳುಹಿಸಲಾಗಿತ್ತು.
‘ಆ ಮಗು ದಾನ ಮಾಡುವುದಕ್ಕಾಗಿಯೇ ಹುಟ್ಟಿತ್ತೇನೋ. ಎಂಟು ದಿನಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡಿದ. ತಲೆಗೆ ವಿಪರೀತ ಏಟಾಗಿತ್ತು. ಇಡೀ ಮಿದುಳಿಗೆ ಸರಿಪಡಿಸಲಾರದಷ್ಟು ಹಾನಿಯಾಗಿರುವುದು ಸಿಟಿ ಸ್ಕ್ಯಾನ್‌ನಿಂದ ತಿಳಿದುಬಂದಿತ್ತು’ ಎಂದು ಏಮ್ಸ್‌ನ ನ್ಯೂರೋಸರ್ಜರಿ ವಿಭಾಗದ ಪ್ರಾಧ್ಯಾಪಕ ದೀಪಕ್ ಗುಪ್ತ ತಿಳಿಸಿದ್ದಾರೆ.
ಆಗಸ್ಟ್ 24ರಂದು ಮಗುವಿನ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಲಾಗಿತ್ತು.
ಮಗುವಿನ ಅಗಲುವಿಕೆಯ ದುಃಖದಲ್ಲಿದ್ದ ಕುಟುಂಬದವರಿಗೆ ವೈದ್ಯರು ಮತ್ತು ಅಂಗಾಂಗ ಸಂರಕ್ಷಣಾ ಬ್ಯಾಂಕಿಂಗ್ ಸಂಘಟನೆ (ಆರ್ಗನ್ ರಿಟ್ರೀವಲ್ ಬ್ಯಾಂಕಿಂಗ್ ಆರ್ಗನೈಸೇಷನ್) ಅಂಗಾಗ ದಾನದ ಸಲಹೆ ನೀಡಿತು. ಬಳಿಕ ಕುಟುಂಬದವರು ಒಪ್ಪಿಗೆ ಸೂಚಿಸಿದರು ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.