ಕೋವಿಡ್
ನವದೆಹಲಿ: ಭಾರತದಲ್ಲಿ ಇಲ್ಲಿಯವರೆಗೆ ಹೊಸದಾಗಿ ಹೊರಹೊಮ್ಮುತ್ತಿರುವ ಕೋವಿಡ್-19 ರೂಪಾಂತರ ವೈರಾಣು XFG ಸೋಂಕಿತ ಸುಮಾರು 163 ಪ್ರಕರಣಗಳು ಪತ್ತೆಯಾಗಿವೆ ಎಂದು ಭಾರತೀಯ ಸಾರ್ಸ್-ಕೋವ್-2 ಜೀನೋಮಿಕ್ಸ್ ಕನ್ಸೋರ್ಟಿಯಂ (ಐಎನ್‌ಎಸ್‌ಎಸಿಒಜಿ) ದತ್ತಾಂಶ ಹೇಳಿದೆ
XFG ರೂಪಾಂತರವು ನಾಲ್ಕು ಪ್ರಮುಖ ರೂಪಾಂತರಗಳ ಸಂಯೋಜನೆಯಾಗಿದೆ. ಕೆನಡಾದಲ್ಲಿ ಮೊದಲು ಪತ್ತೆಯಾದ ಈ ತಳಿ ನಂತರ ವೇಗವಾಗಿ ಜಾಗತಿಕವಾಗಿ ಹರಡಿದೆ ಎಂದು ದಿ ಲ್ಯಾನ್ಸೆಟ್ ಜರ್ನಲ್‌ನ ಲೇಖನವೊಂದು ತಿಳಿಸಿದೆ.
ಭಾರತೀಯ ಸಾರ್ಸ್-ಕೋವ್-2 ಜೀನೋಮಿಕ್ಸ್ ಕನ್ಸೋರ್ಟಿಯಂನ (ಐಎನ್‌ಎಸ್‌ಎಸಿಒಜಿ) ಮಾಹಿತಿಯ ಪ್ರಕಾರ, ಕೋವಿಡ್-19 ಉಂಟುಮಾಡುವ ವೈರಸ್‌ನ XFG ರೂಪಾಂತರವು ದೇಶದಲ್ಲಿ ಒಟ್ಟು 163 ಮಂದಿಯ ಮಾದರಿಗಳಲ್ಲಿ ಕಂಡುಬಂದಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 89, ತಮಿಳುನಾಡಿನಲ್ಲಿ 16, ಕೇರಳದಲ್ಲಿ15, ಗುಜರಾತ್ 11 ಮತ್ತು ಆಂಧ್ರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳಗಳಲ್ಲಿ ತಲಾ 6 ಪ್ರಕರಣ ಪತ್ತೆಯಾಗಿವೆ.
ಮೇ ತಿಂಗಳಲ್ಲಿ 159 ಮಾದರಿಗಳಲ್ಲಿ XFG ರೂಪಾಂತರ ಪತ್ತೆಯಾಗಿದ್ದು, ಏಪ್ರಿಲ್ ಮತ್ತು ಜೂನ್‌ನಲ್ಲಿ ತಲಾ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ದತ್ತಾಂಶದಲ್ಲಿ ಉಲ್ಲೇಖಿಸಲಾಗಿದೆ.
ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 6,000 ದಾಟಿದೆ. ಕಳೆದ 48 ಗಂಟೆಗಳಲ್ಲಿ 769 ಹೊಸ ಪ್ರಕರಣಗಳು ದಾಖಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.