ADVERTISEMENT

2ಜಿ ತನಿಖೆ ವ್ಯಾಪ್ತಿ ವಿಸ್ತರಿಸಿದ ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2010, 9:05 IST
Last Updated 18 ಡಿಸೆಂಬರ್ 2010, 9:05 IST

ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿರುವ ಸುಪ್ರೀಂ ಕೋರ್ಟ್ 2001ರಿಂದ 2008ರ ಅವಧಿಯಲ್ಲಿ ದೂರ ಸಂಪರ್ಕ ಇಲಾಖೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದೆ. ಇದರಿಂದಾಗಿ ಎನ್‌ಡಿಎ ಮತ್ತು ಯುಪಿಎ ಸರ್ಕಾರದ ಅವಧಿಯಲ್ಲಿ ಇಲಾಖೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ತನಿಖೆಗೆ ಅವಕಾಶ ಕಲ್ಪಿಸಿದಂತೆ ಆಗಿದೆ.

ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರನ್ನು ಒಳಗೊಂಡ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ತನಿಖೆಯ ಪ್ರಮುಖ ಉದ್ದೇಶ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ಅಂದಾಜು ಮಾಡುವುದಾಗಿದೆ ಎಂದು ಪೀಠ ಸ್ಪಷ್ಟಪಡಿಸಿದೆ. ತನಿಖೆಯ ಪ್ರಗತಿಯ ವರದಿಯನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಮುಂದಿನ ವಿಚಾರಣೆ ವೇಳೆ 2011ರ ಫೆ.10ರಂದು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದೂ ತಾಕೀತು ಮಾಡಿತು.

ನ್ಯಾಯಾಲಯ ಮೇಲ್ವಿಚಾರಣೆಯ ತನಿಖೆಗೆ ಸರ್ಕಾರ ಒಪ್ಪಿಕೊಂಡಿದ್ದು, ತನಿಖೆ ಸರಿದಾರಿಯಲ್ಲಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ತನಿಖೆಗೆ ವಿಶೇಷ ತಂಡವನ್ನು ರಚಿಸುವ ಅಗತ್ಯ ಇಲ್ಲ ಎನ್ನುವುದನ್ನೂ ಪೀಠ ಸ್ಪಷ್ಟಪಡಿಸಿತು. ಜತೆಗೆ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ ಮತ್ತು ಸಿಬಿಐ ಪರ ಹಾಜರಿದ್ದ ಹಿರಿಯ ನ್ಯಾಯವಾದಿ ಕೆ.ಕೆ.ವೇಣುಗೋಪಾಲ್ ಅವರು, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಹಗರಣದ ಸಮಗ್ರ ತನಿಖೆ ನಡೆಸುತ್ತವೆ ಎನ್ನುವ ಭರವಸೆಯನ್ನು ನ್ಯಾಯಪೀಠಕ್ಕೆ ನೀಡಿದರು.

ಸಿವಿಸಿ ವರದಿ ಆಧರಿಸಿ ಸಿಬಿಐ ತನಿಖೆಯನ್ನು ಮುಂದುವರೆಸಬೇಕು. ಅಲ್ಲದೇ ಸಿಎಜಿ ಪತ್ತೆ ಮಾಡಿರುವ ಅಂಶಗಳಿಂದ ಯೋಗ್ಯರಲ್ಲದವರಿಗೂ ತರಂಗಾಂತರ ಹಂಚಿಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಆ ಆಂಶಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಪೀಠ ಸಿಬಿಐಗೆ ಸೂಚನೆ ನೀಡಿತು. ಸರ್ಕಾರೇತರ ಸಂಸ್ಥೆ ಸಿಪಿಐಎಲ್ ಸಲ್ಲಿಸಿರುವ ಅರ್ಜಿಯನ್ನೂ ನ್ಯಾಯಪೀಠ ಮಾನ್ಯ ಮಾಡಿತು. ಈ ಅರ್ಜಿಯಲ್ಲಿ ಸಿಬಿಐ ತನಿಖೆಗೆ ಕೋರಲಾಗಿತ್ತು. ಆದರೆ ಈ ಮೊದಲು ದೆಹಲಿ ಹೈಕೋರ್ಟ್ ಆ ಅರ್ಜಿಯನ್ನು ವಜಾ ಮಾಡಿತ್ತು. ಕೇಂದ್ರ ಜಾಗೃತ ಆಯೋಗ (ಸಿವಿಸಿ) ವರದಿ ಮತ್ತು ಸಿಎಜಿ ಪತ್ತೆ ಮಾಡಿರುವ ಅಂಶಗಳನ್ನು ತನಿಖೆ ವೇಳೆ ತಾರತಮ್ಯದಿಂದ ನೋಡಬಾರದು ಎಂದೂ ಪೀಠ ಸಲಹೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.