ADVERTISEMENT

2ಜಿ ತರಂಗಾಂತರ ಹಗರಣ ತನಿಖೆ: ಶೀಘ್ರ ಸಿಬಿಐ ಜತೆ ಸಿವಿಸಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2012, 19:30 IST
Last Updated 5 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಪ್ರಕರಣದ ಮುಂದಿನ ತನಿಖೆ ಕುರಿತು ಅನುಸರಿಸಬಹುದಾದ ವಿಧಾನ ಮತ್ತು ನೀಲನಕ್ಷೆ ತಯಾರಿಕೆ ಕುರಿತಂತೆ ಕೇಂದ್ರ ಜಾಗೃತ ಆಯೋಗದ ಮುಖ್ಯಸ್ಥ ಪ್ರದೀಪ್ ಕುಮಾರ್  ಸಿಬಿಐ ನಿರ್ದೇಶಕ ಎ.ಪಿ.ಸಿಂಗ್ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಘಟಕಗಳಾದ ಸಿವಿಸಿ ಮತ್ತು ಸಿಬಿಐ ಮುಖ್ಯಸ್ಥರು ಫೆಬ್ರುವರಿ ತಿಂಗಳಿನಲ್ಲಿ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

2008ರಲ್ಲಿ ದೂರಸಂಪರ್ಕ ಇಲಾಖೆ ಕೆಲವು ಟೆಲಿಕಾಂ ಕಂಪೆನಿಗಳಿಗೆ 2ಜಿ ತರಂಗಾಂತರ ಹಂಚಿಕೆ ಮಾಡಿರುವುದನ್ನು ರದ್ದು ಪಡಿಸಿರುವ ಸುಪ್ರೀಂ ಕೋರ್ಟ್, ಮುಂದಿನ ತನಿಖೆ ನಡೆಸುವಂತೆ ಜಾಗೃತ ಆಯೋಗ ಮತ್ತು ಸಿಬಿಐಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಾಗೃತ ಆಯೋಗದ ಮುಖ್ಯಸ್ಥರು ಸಿಬಿಐ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಮುಂದಿನ ತನಿಖೆಯ ವಿಧಾನಗಳ ಬಗ್ಗೆ ಚರ್ಚಿಸಿ ನೀಲನಕ್ಷೆಯೊಂದನ್ನು ತಯಾರಿಸಲಿದ್ದಾರೆ.
ಜತೆಗೆ ತನಿಖೆ ಪ್ರಗತಿ ಕುರಿತಂತೆ ಪರಾಮರ್ಶಿಸುವ ಸಲುವಾಗಿ ಜಾಗೃತ ಆಯೋಗದ ಮುಖ್ಯಸ್ಥರು ಪ್ರತಿ 15 ದಿನಗಳಿಗೊಮ್ಮೆ ಸಿಬಿಐ ನಿರ್ದೇಶಕರೊಂದಿಗೂ ಚರ್ಚೆ ನಡೆಸಲಿದ್ದಾರೆ.

2ಜಿ ತರಂಗಾಂತರ ಹಂಚಿಕೆ ಪ್ರಕರಣ ಕುರಿತು ಚರ್ಚೆ ನಡೆಸಲು ವಿಶೇಷ ತನಿಖಾ ದಳ (ಸಿಟ್) ನೇಮಿಸುವಂತೆ ಕೋರಿ ಜನತಾಪಕ್ಷದ ಅಧ್ಯಕ್ಷ ಸುಬ್ರಹ್ಮಣಿಯನ್ ಸ್ವಾಮಿ ಅವರು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ಆದರೆ ಕೋರ್ಟ್ ಅರ್ಜಿಯನ್ನು ವಜಾ ಮಾಡಿ, ಸಿವಿಸಿ ಮತ್ತು ಸಿಬಿಐ ತನಿಖೆ ಮುಂದುವರೆಸಲಿ ಎಂದು ಸೂಚನೆ ನೀಡಿತ್ತು.
ಅಲ್ಲದೆ 2008ರಲ್ಲಿ ದೂರಸಂಪರ್ಕ ಇಲಾಖೆ 122 ಟೆಲಿಕಾಂ ಕಂಪೆನಿಗಳಿಗೆ  2ಜಿ ತರಂಗಾಂತರ ಹಂಚಿಕೆ ಮಾಡಿದ್ದನ್ನು ಸುಪ್ರೀಂ ಕೋರ್ಟ್ ರದ್ದು ಪಡಿಸಿತ್ತು.

ಚಿದು ತನಿಖೆಗೆ ಸಿಪಿಎಂ ಆಗ್ರಹ

ನವದೆಹಲಿ (ಪಿಟಿಐ): ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ಟೆಲಿಕಾಂ ಹಗರಣವನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳದೆ ಕರ್ತವ್ಯಲೋಪ ಎಸಗಿರುವ ಆರೋಪದ ಕುರಿತು ತನಿಖೆ ನಡೆಸುವಂತೆ ಸಿಪಿಎಂ ಭಾನುವಾರ ಇಲ್ಲಿ ಆಗ್ರಹಪಡಿಸಿದೆ.

`ಇದೊಂದು ಗಂಭೀರ ಕರ್ತವ್ಯಚ್ಯುತಿಯ ಪ್ರಕರಣವಾಗಿದೆ. ಸ್ಪೆಕ್ಟ್ರಂ ಪರವಾನಗಿಗಳ ದರ ನಿಗದಿಯಲ್ಲಿ ಆಗಿನ ಹಣಕಾಸು ಸಚಿವರು ಜವಾಬ್ದಾರಿ ಹಂಚಿಕೊಳ್ಳಬೇಕಿತ್ತು. ಆದರೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಅವರು ತಮ್ಮ ಹೊಣೆಗಾರಿಕೆ ನಿರ್ವಹಿಸಿದ್ದಾರೆ. ಇದರ ಬಗ್ಗೆ ತನಿಖೆ ನಡೆಯಬೇಕು~ ಎಂದು ಪಕ್ಷದ ನಾಯಕ ನಿಲೋತ್ಪಾಲ್ ಬಸು ಸುದ್ದಿಗಾರರ ಜೊತೆ ಮಾತನಾಡುತ್ತಾ ಒತ್ತಾಯಿಸಿದರು.

 ಜೈಲಿಗೆ ಹೋಗುವುದು ಖಚಿತ: ಮೇನಕಾ
ಬದ್ವಾನ್, ಉತ್ತರಪ್ರದೇಶ (ಪಿಟಿಐ):
ಗೃಹ ಸಚಿವ ಚಿದಂಬರಂ ಅವರು 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಕೋರ್ಟ್ ತೀರ್ಪಿನಿಂದ `ಬಚಾವ್~ ಆಗಿರಬಹುದು. ಆದರೆ ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಇರುವುದರಿಂದ ಒಂದಿಲ್ಲೊಂದು ದಿನ ಜೈಲಿಗೆ ಹೋಗಬೇಕಾಗುತ್ತದೆ ಎಂದು ಬಿಜೆಪಿ ನಾಯಕಿ ಮೇನಕಾ ಗಾಂಧಿ ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT