ADVERTISEMENT

ಕಂಟೇನರ್‌ ಆಧಾರಿತ ಎರಡು ಸಂಚಾರಿ ಆಸ್ಪತ್ರೆಗಳ ಸ್ಥಾಪನೆ: ಕೇಂದ್ರ ಸಚಿವ ಮಾಂಡವೀಯಾ

ಈ ಆಸ್ಪತ್ರೆಗಳನ್ನು ರೈಲು, ವಿಮಾನ ಮೂಲಕ ಸಾಗಿಸಲು ಸಾಧ್ಯ

ಪಿಟಿಐ
Published 26 ಅಕ್ಟೋಬರ್ 2021, 12:43 IST
Last Updated 26 ಅಕ್ಟೋಬರ್ 2021, 12:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಧಾನಮಂತ್ರಿ ಆಯುಷ್ಮಾನ್‌ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್‌ನಡಿ ಕಂಟೇನರ್ ಆಧಾರಿತ ಎರಡು ಸಂಚಾರಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವೀಯಾ ಮಂಗಳವಾರ ತಿಳಿಸಿದರು.

‘ತಲಾ 100 ಹಾಸಿಗೆ ಸಾಮರ್ಥ್ಯದ ಈ ಸಂಚಾರಿ ಆಸ್ಪತ್ರೆಗಳು ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರಲಿವೆ. ದೆಹಲಿ ಹಾಗೂ ಚೆನ್ನೈನಲ್ಲಿ ಒಂದೊಂದು ಆಸ್ಪತ್ರೆಯನ್ನಿರಿಸಲಾಗುವುದು. ತುರ್ತು ಸಂದರ್ಭಗಳಲ್ಲಿ ಈ ಆಸ್ಪತ್ರೆಗಳನ್ನು ರೈಲು ಮೂಲಕ ಸಾಗಿಸಲು ಅಥವಾ ಏರ್‌ಲಿಫ್ಟ್‌ ಮಾಡಿ ಅಗತ್ಯ ಕಂಡು ಬಂದ ಪ್ರದೇಶಕ್ಕೆ ಒಯ್ಯಬಹುದು’ ಎಂದು ಅವರು ಹೇಳಿದರು.

‘ಎಲ್ಲ ವೈದ್ಯಕೀಯ ಸೌಲಭ್ಯಗಳಿದ್ದು ಸದಾ ಸನ್ನದ್ಧ ಸ್ಥಿತಿಯಲ್ಲಿರುವ ಕಂಟೇನರ್‌ ಆಧಾರಿತ ಆಸ್ಪತ್ರೆಗಳನ್ನು ಹೊಂದಿದ ದಕ್ಷಿಣ ಏಷ್ಯಾದ ಎರಡನೇ ರಾಷ್ಟ್ರವೆಂಬ ಹೆಗ್ಗಳಿಕೆ ಭಾರತದ್ದಾಗಲಿದೆ’ ಎಂದೂ ಹೇಳಿದರು.

ADVERTISEMENT

‘ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು ಕೋವಿಡ್‌ ಪಿಡುಗು ಅವಕಾಶ ಒದಗಿಸಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ವಿಷಯಕ್ಕೆ ಸಂಬಂಧಿಸಿ ಸಮಗ್ರವಾಗಿ ಸ್ಪಂದಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇದರ ಭಾಗವಾಗಿ ₹ 64,000 ಕೋಟಿ ವೆಚ್ಚದ ಪಿಎಂ ಆಯುಷ್ಮಾನ್‌ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್‌ಗೆ ಚಾಲನೆ ನೀಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.