ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬ ಸದಸ್ಯರ ಟ್ರಸ್ಟ್‌ಗಳಿಗೆ ಗಣಿ ಕಂಪೆನಿಗಳಿಂದ ಹಣ ಸಂದಾಯವಾಗಿದೆ ಎನ್ನಲಾದ ಆರೋಪಗಳ ಕುರಿತು ಸಿಬಿಐ ತನಿಖೆ ಅಗತ್ಯವೇ ಅಥವಾ ಬೇಡವೇ ಎಂಬ ಬಗ್ಗೆ ಸುಪ್ರೀಂಕೋರ್ಟ್ ನೇಮಿಸಿರುವ ಕೇಂದ್ರದ ಉನ್ನತಾಧಿಕಾರ ಸಮಿತಿಯು (ಸಿಇಸಿ) ಏ.20ರಂದು ವರದಿ ಸಲ್ಲಿಸಲಿದೆ.
ಈ ಸಂಬಂಧ ಸಿಇಸಿ ಬುಧವಾರ ವಿಚಾರಣೆ ಪ್ರಕ್ರಿಯೆ ಪೂರೈಸಿತು. ಇದೇ ವೇಳೆ ಕರ್ನಾಟಕ ಸರ್ಕಾರ, ಯಡಿಯೂರಪ್ಪ ಮತ್ತು ಖಾಸಗಿ ಗಣಿ ಕಂಪೆನಿಗಳಿಗೆ ಏ.18ರೊಳಗೆ ಲಿಖಿತ ಅಭಿಪ್ರಾಯಗಳನ್ನು ಸಲ್ಲಿಸಲು ಸೂಚಿಸಿತು.
ತಮ್ಮನ್ನು ಪುನಃ ಮುಖ್ಯಮಂತ್ರಿ ಮಾಡಬೇಕೆಂದು ಪಟ್ಟಿನ ಮೇಲೆ ಪಟ್ಟು ಹಾಕುತ್ತಿರವ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರು ಈ ವರದಿಯನ್ನು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಒಂದೊಮ್ಮೆ ಈ ಆರೋಪಗಳ ಕುರಿತು ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಸಿಇಸಿ ಅಭಿಪ್ರಾಯಪಟ್ಟರೆ, ಯಡಿಯೂರಪ್ಪ ಕೂಗಿಗೆ ಇನ್ನಷ್ಟು ಬಲ ಬರುತ್ತದೆ.
ಸಿಇಸಿ ವರದಿಯ ಶಿಫಾರಸು ಆಧರಿಸಿ, ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ನೇತೃತ್ವದ ಸುಪ್ರೀಂಕೋರ್ಟ್‌ನ ಹಸಿರು ಪೀಠವು ಸಿಬಿಐ ತನಿಖೆ ನಡೆಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ತೀರ್ಮಾನಕ್ಕೆ ಬರಲಿದೆ.
ಉತ್ತರ ಕನ್ನಡದ ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ರಫ್ತು ಮಾಡಿದ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಅಗತ್ಯವೇ ಎಂಬ ಬಗ್ಗೆ ನಿರ್ಧರಿಸಲು ಕೂಡ ಸಿಇಸಿ ವರದಿ ಆಧಾರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.