ADVERTISEMENT

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಐಎಎನ್ಎಸ್
Published 20 ನವೆಂಬರ್ 2021, 9:56 IST
Last Updated 20 ನವೆಂಬರ್ 2021, 9:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ವಾರ 20 ವರ್ಷದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಪ್ರಕರಣದಲ್ಲಿ ಈ ವರೆಗೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 13 ರಂದು ದೆಹಲಿಯ ಪಾಂಡವ ನಗರ ಪೊಲೀಸ್ ಠಾಣೆಗೆ ಕರೆ ಬಂದಿತ್ತು. ಕರೆ ಆಧಾರದಲ್ಲಿ ಮಯೂರ್ ವಿಹಾರದ ಒಂದನೇ ಹಂತಕ್ಕೆ ತೆರಳಿದಾಗ ಪೊಲೀಸರಿಗೆ ಅಲ್ಲಿ ಇಬ್ಬರು ಹೆಣ್ಣುಮಕ್ಕಳು ಪತ್ತೆಯಾಗಿದ್ದರು. ಅದರಲ್ಲಿ ಒಬ್ಬ ಯುವತಿಯ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಗೊತ್ತಾಯಿತು. ಆರೋಪಿಗಳು ಸಂತ್ರಸ್ತೆಯೊಂದಿಗಿದ್ದ ಅಪ್ರಾಪ್ತೆ ಮೇಲೂ ಹಲ್ಲೆಗೂ ಯತ್ನಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸಂತ್ರಸ್ತೆಗೆ ಆಪ್ತ ಸಮಾಲೋಚನೆ ನೀಡಲಾಗಿದೆ. ಸಂತ್ರಸ್ತೆ ಮತ್ತು ಜೊತೆಗಿದ್ದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ಮಾಡಿದ ಕೃತ್ಯ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ADVERTISEMENT

ಆರೋಪಿಗಳ ಪತ್ತೆಗೆ ಪೊಲೀಸರು ಹಲವು ತಂಡಗಳನ್ನು ರಚಿಸಿ, ಶೋಧ ಕಾರ್ಯ ಆರಂಭಿಸಿದ್ದರು. ಅವರನ್ನು ದೆಹಲಿಯ ಆಚಾರ್ಯ ನಿಕೇತನ ಪಟ್ಪರ್‌ಗಂಜ್ ನಿವಾಸಿ ನವಲ್ ಮತ್ತು ದೆಹಲಿಯ ಪಾಂಡವ್ ನಗರದ ನಿವಾಸಿ ನಾಗೇಂದ್ರ ಭಟ್ಟಿ ಎಂದು ಗುರುತಿಸಲಾಗಿತ್ತು. ಕೆಲ ದಿನಗಳ ಹಿಂದೆ ಅವರನ್ನು ನಗರದ ಯಮುನಾ ಖಾದರ್‌ನಲ್ಲಿ ಬಂಧಿಸಲಾಗಿದೆ.

ಆರೋಪಿಗಳು ತಾವೇ ಅಪರಾಧವೆಸಗಿರುವುದಾಗಿ ತೀವ್ರ ವಿಚಾರಣೆ ನಂತರ ಒಪ್ಪಿಕೊಂಡಿದ್ದಾರೆ. ಪ್ರಕರಣ ವಿಸ್ತೃತ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.