ADVERTISEMENT

ಪಂಜಾಬ್‌ನಲ್ಲಿ ಕಳ್ಳಭಟ್ಟಿ ಸೇವಿಸಿ 38 ಜನ ಸಾವು: ನ್ಯಾಯಾಂಗ ತನಿಖೆಗೆ ಆದೇಶ

ಏಜೆನ್ಸೀಸ್
Published 31 ಜುಲೈ 2020, 20:33 IST
Last Updated 31 ಜುಲೈ 2020, 20:33 IST
ಅಮರೀಂದರ್‌ ಸಿಂಗ್‌
ಅಮರೀಂದರ್‌ ಸಿಂಗ್‌   

ಚಂಡೀಗಡ: ಪಂಜಾಬ್‌ನ ಮೂರು ಜಿಲ್ಲೆಗಳಲ್ಲಿ ನಕಲಿ ಮದ್ಯ ಸೇವಿಸಿ ಒಟ್ಟು 38ಮಂದಿ ಮೃತಪಟ್ಟಿದ್ದಾರೆ.ಈ ಕುರಿತು ನ್ಯಾಯಾಂಗ‌ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಶುಕ್ರವಾರ ಆದೇಶಿಸಿದ್ದಾರೆ.

‘ಸಾವಿಗೀಡಾದವರುಅಮೃತಸರ, ಬಟಾಲ ಮತ್ತು ತರ್ನ್‌ ಟರಾನ್‌ ಜಿಲ್ಲೆಗಳ ನಿವಾಸಿಗಳಾಗಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಅಮೃತಸರದ ತಾರ್‌ಸಿಕ್ಕಾದ ಮುಚ್ಚಾಲ್‌ ಹಾಗೂ ತಾಂಗ್ರಾ ಗ್ರಾಮಗಳಲ್ಲಿ ಮೊದಲು ಈ ಪ್ರಕರಣ ಬೆಳಕಿಗೆ ಬಂದಿತು. ಬುಧವಾರ ರಾತ್ರಿ ಇಲ್ಲಿ ಒಟ್ಟು ಐದು ಮಂದಿ ಸತ್ತಿದ್ದರು. ಗುರುವಾರ ಸಂಜೆ ಮುಚ್ಚಾಲ್‌ನಲ್ಲಿ ಮತ್ತಿಬ್ಬರು ಹಾಗೂ ಅಮೃತಸರದ ಶ್ರೀ ಗುರು ರಾಮದಾಸ್‌ ಆಸ್ಪತ್ರೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದ. ಬಳಿಕ ಮುಚ್ಚಾಲ್‌ ಮತ್ತು ಬಟಾಲದಲ್ಲಿ ತಲಾ ಇಬ್ಬರು ಸತ್ತಿದ್ದರು’ ಎಂದು ಪಂಜಾಬ್‌ ಡಿಜಿಪಿ ದಿನಕರ್‌ ಗುಪ್ತಾ ಹೇಳಿದ್ದಾರೆ.

ADVERTISEMENT

‘ಶುಕ್ರವಾರ ಬಟಾಲ ಹಾಗೂ ಟರಾನ್‌ನಲ್ಲಿ ಕ್ರಮವಾಗಿ ಐದು ಮತ್ತು ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಚ್ಚಾಲ್‌ ಗ್ರಾಮದ ನಿವಾಸಿ ಬಲ್ವಿಂದರ್‌ ಕೌರ್‌ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಐಪಿಸಿ ಸೆಕ್ಷನ್‌ 304 ಮತ್ತು ಅಬಕಾರಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು
ತಿಳಿಸಿದ್ದಾರೆ.

ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಜಲಂಧರ್ ವಿಭಾಗದ ಕಮಿಷನರ್ ಅವರನ್ನು ನೇಮಕ ಮಾಡಲಾಗಿದ್ದು ಆರೋಪಿಗಳಿಗೆ ತಕ್ಕ ಶಿಕ್ಷೆ ಖಚಿತ ಎಂದು ಅಮರೀಂದರ್ ಸಿಂಗ್ ಟ್ವೀಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.