ADVERTISEMENT

22 ವರ್ಷ ಕಣ್ತಪ್ಪಿಸಿದ್ದ ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 18:30 IST
Last Updated 13 ಫೆಬ್ರುವರಿ 2011, 18:30 IST

ನವದೆಹಲಿ: ಸುಮಾರು 22 ವರ್ಷಗಳ ಕಾಲ ಕಾನೂನಿನ ಕಣ್ತಪ್ಪಿಸಿ ಓಡಾಡುತ್ತಿದ್ದ ಕೊಲೆ ಪ್ರಕರಣದಲ್ಲಿ ಅಮೆರಿಕ ಹುಡುಕುತ್ತಿದ್ದ ಬಾಂಗ್ಲಾದೇಶ ಮೂಲದ ಆರೋಪಿಯೊಬ್ಬ ಇಲ್ಲಿ ಇದೀಗ ಬಂಧಿತನಾಗಿ, ಅಮೆರಿಕಕ್ಕೆ ಹಸ್ತಾಂತರಗೊಳ್ಳುವ ಹಂತದಲ್ಲಿದ್ದಾನೆ.

ಮಾಫುಜ್ ಹಕ್ ಎಂಬಾತ ತನ್ನ ಮಾಜಿ ಪ್ರಿಯತಮೆ ಕ್ರಿಸ್ಟಿನ್ ಮಟ್ಜ್‌ಫೆಲ್ಡ್ ಎಂಬಾಕೆಯ ಹೊಸ ಪ್ರಿಯಕರ ಟಾಡ್ ಕೆಲ್ಲಿಯನ್ನು ಹತ್ಯೆ ಮಾಡಿರುವ ಆರೋಪ ಹೊತ್ತಿದ್ದಾನೆ. 1989ರ ಆಗಸ್ಟ್ 8ರ ರಾತ್ರಿ ಅಮೆರಿಕದ ಇಂಡಿಯಾನಾ ರಾಜ್ಯದ ಹ್ಯಾಮಿಲ್ಟನ್ ನಗರದಲ್ಲಿ ಕೆಲ್ಲಿ ಮನೆಗೆ ನುಗ್ಗಿ, ಆತನನ್ನು ಚೂರಿಯಿಂದ ಇರಿದು ಕೊಂದ ಆರೋಪ ಹಕ್ ಮೇಲಿದೆ.

ನಂತರ ಅಮೆರಿಕದಿಂದ ಬಾಂಗ್ಲಾಕ್ಕೆ ಬಂದು ಆಸಿಫ್ ಉಲ್ ಹಕ್ ಎಂಬ ನಕಲಿ ಹೆಸರಿನೊಂದಿಗೆ ಬದಲಿ ಜನ್ಮ ದಿನಾಂಕ ಮತ್ತು ಪಾಸ್‌ಪೋರ್ಟ್ ಹೊಂದಿ, ಢಾಕಾ ಶಾಲೆಯೊಂದರಲ್ಲಿ ಕ್ರೀಡಾ ಶಿಕ್ಷಕನಾಗಿ ಸೇರಿಕೊಂಡಿದ್ದನು. ಈತ ಟೆನಿಸ್ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಇತ್ತೀಚೆಗೆ ದೆಹಲಿಗೆ ಬಂದು ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.