ADVERTISEMENT

ಭ್ರಷ್ಟಾಚಾರ: ಬೆಂಗಳೂರಿನ ಇಬ್ಬರು ಅಧಿಕಾರಿಗಳು ಸೇರಿ 22 ಅಧಿಕಾರಿಗಳು ಮನೆಗೆ

ಬೆಂಗಳೂರಿನ ಇಬ್ಬರು ಅಧಿಕಾರಿಗಳಿಗೂ ಅಮಾನತು ಬಿಸಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 20:15 IST
Last Updated 26 ಆಗಸ್ಟ್ 2019, 20:15 IST
   

ನವದೆಹಲಿ: ಬೆಂಗಳೂರು ವಲಯದ ಇಬ್ಬರು ಸೇರಿದಂತೆ ನೇರ ತೆರಿಗೆ ಮತ್ತು ಕಸ್ಟಮ್ಸ್ ಇಲಾಖೆಯ 22 ಹಿರಿಯ ಅಧಿಕಾರಿಗಳನ್ನು ಭ್ರಷ್ಟಾಚಾರ ಆರೋಪದಲ್ಲಿ ಸೋಮವಾರ ವಜಾಗೊಳಿಸಲಾಗಿದೆ.

1967ನೇ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ಡಿ. ಅಶೋಕ್ ಸೇರಿದಂತೆ ಎಲ್ಲರಿಗೂ ನೇರ ತೆರಿಗೆ ಮತ್ತು ಕಸ್ಟಮ್ಸ್‌ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಕಡ್ಡಾಯ ನಿವೃತ್ತಿ ಪ್ರಕಟಿಸಿದೆ.

ಅಶೋಕ್ ಅವರು ಬೆಂಗಳೂರಿನ ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರಿಗೆ ಸೇರಿದ ಲಗೇಜ್ ತಪಾಸಣೆ ನಡೆಸದೇ ಬಿಟ್ಟಿದ್ದರು ಎ‌ನ್ನಲಾಗಿದೆ. ಲಗೇಜ್‌ನಲ್ಲಿ ಚಿನ್ನ ಇರಿಸಲಾಗಿತ್ತು. ಇದಕ್ಕಾಗಿ ಅಶೋಕ್ ₹1.69 ಲಕ್ಷ ಪಡೆದಿದ್ದರು ಎಂದು ಆರೋಪವಿದೆ.

ADVERTISEMENT

ವಜಾಗೊಂಡ ಹೆಚ್ಚಿನ ಅಧಿಕಾರಿಗಳು ಭೋಪಾಲ್‌ ವಲಯಕ್ಕೆ ಸೇರಿದ್ದಾರೆ. ನಿಗೂಢ ವಸ್ತುಗಳ ತಯಾರಿಕೆ ಹಾಗೂ ಸಿಗರೇಟ್‌ ಸಾಗಣೆಗೆ ಸಂಬಂಧಿಸಿದ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟ ಆರೋಪ ಈ ಅಧಿಕಾರಿಗಳ ಮೇಲಿದೆ.

ಭ್ರಷ್ಟಾಚಾರ, ಲಂಚ ಪಾವತಿ, ಲಂಚ ಪಡೆದಿರುವುದು, ಕಳ್ಳಸಾಗಣೆ ಹಾಗೂ ಕ್ರಿಮಿನಲ್ ಸಂಚು ಆರೋಪದಡಿ ಆಯುಕ್ತ ದರ್ಜೆಯ 15 ಅಧಿಕಾರಿಗಳನ್ನು ಇತ್ತೀಚೆಗೆ ಕಡ್ಡಾಯ ನಿವೃತ್ತಿ ಪ್ರಕಟಿಸಿದ ಬೆನ್ನಲ್ಲೇ 22 ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ.

ಇದಕ್ಕೂ ಮುನ್ನ ಭ್ರಷ್ಟಾಚಾರ, ಲೈಂಗಿಕ ಕಿರುಕುಳ, ಅಕ್ರಮ ಆಸ್ತಿ ಸಂಪಾದನೆ ಪ್ರಕರಣಗಳಲ್ಲಿ ಆದಾಯ ತೆರಿಗೆ ಇಲಾಖೆಯ 12 ಮಂದಿ ಹಿರಿಯ ಐಆರ್‌ಎಸ್ ಅಧಿಕಾರಿಗಳನ್ನು ವಜಾಗೊಳಿಸಲಾಗಿತ್ತು.

ಕೆಲವು ತೆರಿಗೆ ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಪ್ರಾಮಾಣಿಕ ತೆರಿಗೆದಾರರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.