ADVERTISEMENT

25ರ ಬೆನೊ ಐಎಫ್‌ಎಸ್‌ ಅಧಿಕಾರಿ

ಅಂಧ ವ್ಯಕ್ತಿಗೆ ಸಿಕ್ಕ ಮೊದಲ ಅವಕಾಶ

​ಪ್ರಜಾವಾಣಿ ವಾರ್ತೆ
Published 15 ಜೂನ್ 2015, 19:30 IST
Last Updated 15 ಜೂನ್ 2015, 19:30 IST
ಎನ್‌.ಎಲ್‌ ಬೆನೊ ಝೆಫೈನ್‌
ಎನ್‌.ಎಲ್‌ ಬೆನೊ ಝೆಫೈನ್‌   

ಚೆನ್ನೈ (ಪಿಟಿಐ): ತಮಿಳುನಾಡಿನ 25 ವರ್ಷದ ಯುವತಿ, ಸಂಪೂರ್ಣ ಅಂಧೆಯಾಗಿರುವ ಎನ್‌.ಎಲ್‌ ಬೆನೊ ಝೆಫೈನ್‌ ಎಂಬ  ಯುವತಿ ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್‌) ಸೇರುವುದಕ್ಕೆ ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಂಡಿವೆ.

60 ದಿನಗಳೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಕೇಂದ್ರ ಸರ್ಕಾರ ಅವರಿಗೆ ಆದೇಶ ಕಳುಹಿಸಿದೆ. ಸಾಹಿತ್ಯದಲ್ಲಿ ಪದವಿ ಪಡೆದಿರುವ ಝೆಫೈನ್‌, ಆದಷ್ಟು ಬೇಗ ದೆಹಲಿಗೆ ಹೋಗಿ ಕೆಲಸಕ್ಕೆ ಸೇರಲು ಉತ್ಸುಕರಾಗಿದ್ದಾರೆ. 2014ರಲ್ಲಿಯೇ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಈಗ ಒಂದು ವರ್ಷದ ವಿಳಂಬದ ಬಳಿಕ ವಿದೇಶಾಂಗ ಸಚಿವಾಲಯ ಅವರಿಗೆ ಕರೆ ಕಳುಹಿಸಿದೆ. ಸಂಪೂರ್ಣ ಅಂಧರಾಗಿರುವವರನ್ನು ಐ.ಎಫ್‌.ಎಸ್‌ಗೆ  ಸೇರಿಸಿಕೊಳ್ಳುವುದಕ್ಕೆ ಇರುವ ತೊಡಕುಗಳನ್ನು ನಿವಾರಿಸಿ ಅವರನ್ನು ಸೇರಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ನೀಡಿದ್ದರು ಎಂದು ತಿಳಿದು ಬಂದಿದೆ. ಇದಕ್ಕಾಗಿ ಬೆನೊ ಅವರು ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

‘ನಾನು ಐಎಫ್‌ಎಸ್‌ಗೆ ಅರ್ಹಳಾಗಿದ್ದೇನೆ ಎಂದು ನನಗೆ ಹೇಳಲಾಗಿದೆ. ಆದರೆ ಈವರೆಗೆ ಶೇ ನೂರರಷ್ಟು ಕಣ್ಣು ಕಾಣಿಸದವರಿಗೆ ಹುದ್ದೆಯನ್ನು ನೀಡಲಾಗಿಲ್ಲ’ ಎಂದು ಸಂಭ್ರಮದಿಂದ ಕುಣಿಯುತ್ತಿರುವ ಝೆಫೈನ್‌ ಹೇಳಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿಯೂ ಸೇವೆ ಸಲ್ಲಿಸಬೇಕಾಗುತ್ತದೆ ಎಂಬುದನ್ನು ಅವರಿಗೆ ಹೇಳಲಾಗಿದೆ. ಅವರು ಯಾವುದೇ ದೇಶದಲ್ಲಾದರೂ ಸೇವೆ ಸಲ್ಲಿಸಲು ಸಿದ್ಧ ಎಂದು ಹೇಳಿದ್ದಾರೆ.

ತಮ್ಮ ಈ ಸಾಧನೆಗೆ ಹೆತ್ತವರೇ ಮುಖ್ಯ ಕಾರಣ ಎಂದು ಝೆಫೈನ್‌ ಹೇಳಿದ್ದಾರೆ. ತಮ್ಮನ್ನು ಅಪ್ಪ ಬೇಕಾದಲ್ಲಿಗೆ ಕರೆದೊಯ್ದಿದ್ದಾರೆ. ಕೇಳಿದ ಪುಸ್ತಕ ಕೊಡಿಸಿದ್ದಾರೆ. ತಾಯಿ ಓದುವುದಕ್ಕೆ ನೆರವಾಗಿದ್ದಾರೆ. ಕೆಲವೊಮ್ಮೆ ಅವರೇ ಜೋರಾಗಿ ಓದಿ ಹೇಳುತ್ತಿದ್ದರು ಎಂದು ಝೆಫೈನ್‌ ವಿವರಿಸಿದ್ದಾರೆ. ಝೆಫೈನ್‌ ಈಗ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿದ್ದಾರೆ. ಜೊತೆಗೆ ಪಿಎಚ್‌.ಡಿ ಅಧ್ಯಯನವನ್ನೂ ನಡೆಸುತ್ತಿದ್ದಾರೆ.

ಪೂರ್ತಿ ಅಂಧರಾಗಿರುವವರನ್ನು ಐಎಫ್‌ಎಸ್‌ ಸೇವೆಗೆ ಸೇರ್ಪಡೆ ಮಾಡಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದೊಂದು ಕ್ರಾಂತಿಕಾರಕ ಕ್ರಮ ಎಂದು ಹಲವು ಮಾಜಿ ರಾಜತಾಂತ್ರಿಕ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.