ADVERTISEMENT

‘ಹಿಂದೂ ರಾಷ್ಟ್ರ’ಕ್ಕೆ ‘ಸಂವಿಧಾನ’ ಸಿದ್ಧ

ಮಹಾಕುಂಭ ಮೇಳದಲ್ಲಿ ಫೆ.3ರಂದು ಸಾರ್ವಜನಿಕಗೊಳ್ಳಲಿರುವ ನಿಮಯಗಳು

ಸಂಜಯ್ ಪಾಂಡೆ, ಲಖನೌ
Published 25 ಜನವರಿ 2025, 20:42 IST
Last Updated 25 ಜನವರಿ 2025, 20:42 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಲಖನೌ: ‘ಅಖಂಡ ಹಿಂದೂ ರಾಷ್ಟ್ರ’ಕ್ಕಾಗಿ 501 ಪುಟಗಳ ‘ಸಂವಿಧಾನ’ ಸಿದ್ಧಗೊಂಡಿದೆ. ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ‘ಬಸಂತ ಪಂಚಮಿ’ಯಂದು (ಫೆ.3) ಈ ‘ಸಂವಿಧಾನ’ವನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುತ್ತಿದೆ.

ಮನುಸ್ಮೃತಿ, ರಾಮ ರಾಜ್ಯ ಮತ್ತು ಚಾಣಕ್ಯನ ‘ಅರ್ಥಶಾಸ್ತ್ರ’ದಲ್ಲಿನ ತತ್ವಾದರ್ಶಗಳ ಆಧಾರದಲ್ಲಿ ದೇಶದಾದ್ಯಂತ ಇರುವ ತಜ್ಞರು ಈ ಸಂವಿಧಾನವನ್ನು ರಚಿಸಿದ್ದಾರೆ. ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪೀಠದ ಶಂಕರಾಚಾರ್ಯರು ಒಪ್ಪಿಗೆ ನೀಡಿದ ಬಳಿಕ ಈ ಸಂವಿಧಾನವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ.

ADVERTISEMENT

‘ಸಂವಿಧಾನ’ದಲ್ಲೇನಿದೆ?

* ಪ್ರತಿಯೊಬ್ಬ ನಾಗರಿಕನೂ ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ. ಕೃಷಿ ಆದಾಯವು ತೆರಿಗೆ ವ್ಯವಸ್ಥೆಯೊಳಗೆ ಬರುವುದಿಲ್ಲ. ಏಕಪತ್ನಿತ್ವ ಮತ್ತು ಅವಿಭಕ್ತ ಕುಟುಂಬ ವ್ಯವಸ್ಥೆಗೆ ಪ್ರೋತ್ಸಾಹ ಮತ್ತು ಜಾತಿ ಪದ್ಧತಿ ರದ್ದು 

* ಹಿಂದೂ ನ್ಯಾಯಾಂಗ ವ್ಯವಸ್ಥೆ ಜಾರಿಯಾಗಲಿದ್ದು ತ್ವರಿತ ನ್ಯಾಯದಾನ ವ್ಯವಸ್ಥೆ ಇರಲಿದೆ. ವ್ಯಕ್ತಿತ್ವ  ಬದಲಾವಣೆಯೇ ಶಿಕ್ಷೆ ನೀಡುವುದಕ್ಕೆ ಮುಖ್ಯ ಉದ್ದೇಶ. ಸುಳ್ಳು ಆರೋಪ ಮಾಡುವವರಿಗೂ ಶಿಕ್ಷೆ

* ಗುರುಕುಲ ಪದ್ಧತಿ ಜಾರಿ. ಈಗಿರುವ ಎಲ್ಲ ಆಂಗ್ಲ ಮಾಧ್ಯಮ ಶಾಲೆಗಳನ್ನು ಗುರುಕುಲಗಳನ್ನಾಗಿ ಮರುರೂಪಿಸಲಾಗುವುದು ಮತ್ತು ಸರ್ಕಾರದ ಆರ್ಥಕ ನೆರವಿನಿಂದ ನಡೆಯುತ್ತಿರುವ ಎಲ್ಲ ಮದರಸಾಗಳನ್ನು ಮುಚ್ಚಿಸಲಾಗುವುದು

ಈ ಸಂವಿಧಾನವು ಯಾವುದೇ ಧರ್ಮದ ವಿರುದ್ಧ ಇಲ್ಲ. ಎಲ್ಲ ಧರ್ಮದ ಜನರೂ ಸ್ವತಂತ್ರವಾಗಿ ಈ ದೇಶದಲ್ಲಿ ಬದುಕಬಹುದು.
–ಆನಂದ ಸ್ವರೂಪ, ಶಾಂಭವಿ ಪೀಠಾಧೀಶ್ವರ

ಚುನಾವಣೆಯಲ್ಲಿ ಸ್ಪರ್ಧೆ: ವೇದಾಧ್ಯಯನ ಕಡ್ಡಾಯ ಹಿಂದೂ ರಾಷ್ಟ್ರದ ‘ಸಂವಿಧಾನ’ದಲ್ಲಿ ‘ಏಕ ಸದನ ಸಂಸದೀಯ ವ್ಯವಸ್ಥೆ’ಯನ್ನು ಪ್ರತಿಪಾದಿಸಲಾಗಿದೆ. ಸಂಸತ್ತಿಗೆ ‘ಧರ್ಮ ಸಂಸತ್ತು’ ಎಂದು ಹೆಸರಿಸಲಾಗಿದೆ.

* ಸನಾತನ ಧರ್ಮದ ಅನುಯಾಯಿಗಳು ಮಾತ್ರವೇ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಗುರುಕುಲ ಪದ್ಧತಿಯಲ್ಲಿ ವೇದಾಧ್ಯಯನ ಮಾಡಿದವರು ಮಾತ್ರವೇ ಅಭ್ಯರ್ಥಿಯಾಗಬಹುದು. ಧರ್ಮ ಸಂಸತ್ ಪ್ರವೇಶಿಸುವವರಿಗೆ ಕ್ಷೇತ್ರ ನಿರ್ವಹಣೆ ಭತ್ಯೆ ಸರಳೀಕೃತ ಭದ್ರತೆ ವ್ಯವಸ್ಥೆ ಮತ್ತು ಒಂದು ವಾಹನವನ್ನು ನೀಡಲಾಗುವುದು. ಸನಾತನ ಧರ್ಮವೂ ಸೇರಿ ಭಾರತ ಉಪಖಂಡದ ಧರ್ಮಗಳಾದ ಜೈನ ಸಿಖ್ ಬೌದ್ಧ ಅನುಯಾಯಿಗಳಿಗೆ ಮಾತ್ರವೇ ಮತದಾನದ ಹಕ್ಕು ಇರಬೇಕು

* ತಮ್ಮ ಕ್ಷೇತ್ರದ ಪ್ರತಿನಿಧಿಯು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾದರೆ ಅವರನ್ನು ಹಿಂಪಡೆಯುವ ಹಕ್ಕು ಮತದಾರರಿಗೆ ಇರಲಿದೆ. ದೂರುಗಳು ಬಂದಾಗ ಧರ್ಮ ಸಂಸತ್ತು ಈ ಬಗ್ಗೆ ಜನಾಭಿಪ್ರಾಯ ಕೇಳಲಿದೆ. ಕ್ಷೇತ್ರದ 50 ಸಾವಿರ ಜನರು ಈ ಸಂಬಂಧ ಪ್ರಸ್ತಾವಕ್ಕೆ ಸಹಿ ಮಾಡಿದರೆ ಪ್ರತಿನಿಧಿಯನ್ನು ಹಿಂಪಡೆಯಲಾಗುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.