ADVERTISEMENT

ಅಪಾಯದಲ್ಲಿದ್ದ 26 ಬಾಲಕಿಯರರಕ್ಷಿಸಿದ ರೈಲ್ವೆ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 14:27 IST
Last Updated 6 ಜುಲೈ 2018, 14:27 IST

ನವದೆಹಲಿ: ಮುಜಫ್ಫರ್‌ಪುರ–ಬಾಂದ್ರಾ ಅವಧ್‌ ಎಕ್ಸ್‌ಪ್ರೆಸ್‌ನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ 26 ಬಾಲಕಿಯರನ್ನು ರಕ್ಷಿಸಲಾಗಿದೆ.

ಎಸ್‌5 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು, 26 ಬಾಲಕಿಯರು ಅಳುತ್ತಿರುವುದನ್ನು ಗಮನಿಸಿ ಅವರು ಸಂದಿಗ್ಧ ಸ್ಥಿತಿಯಲ್ಲಿರುವಂತೆ ಕಾಣಿಸುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಅರ್ಧಗಂಟೆಯಲ್ಲಿಯೇಟ್ವೀಟ್ ಗಮನಿಸಿದ ವಾರಾಣಸಿ ಹಾಗೂ ಲಖನೌ ಅಧಿಕಾರಿಗಳು ತಕ್ಷಣವೇ ಕ್ರಮಕ್ಕೆ ಮುಂದಾದರು ‌ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.

ಗೋರಖಪುರ ರೈಲ್ವೆ ಪೊಲೀಸರು, ಮಕ್ಕಳ ಸಹಾಯವಾಣಿ ಜತೆಗೂಡಿ ಕಾರ್ಯಾಚರಣೆ ಆರಂಭಿಸಿದರು.ಕಪ್ತಾನ್‌ಗಂಜ್‌ನಲ್ಲಿ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಮಫ್ತಿಯಲ್ಲಿ ರೈಲು ಹತ್ತಿ ಮಕ್ಕಳನ್ನು ರಕ್ಷಿಸಿದ್ದಾರೆ.

ADVERTISEMENT

‘ಬಾಲಕಿಯರೊಂದಿಗೆ 22 ವರ್ಷ ಹಾಗೂ 55 ವರ್ಷದ ಇಬ್ಬರು ವ್ಯಕ್ತಿಗಳಿದ್ದರು. ಇವರೆಲ್ಲರೂ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯವರು.ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಆರ್‌ಪಿಎಫ್‌ ಸಿಬ್ಬಂದಿ ತಿಳಿಸಿದ್ದಾರೆ.

‘ಬಾಲಕಿಯರನ್ನು ಪ್ರಶ್ನಿಸಿದಾಗ ಅವರಿಗೆ ಸೂಕ್ತ ವಿವರ ನೀಡಲು ಸಾಧ್ಯವಾಗಿಲ್ಲ. ಆದ್ದರಿಂದ ಅವರನ್ನು ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿ ವಶಕ್ಕೆ ನೀಡಲಾಗಿದ್ದು,ಪೋಷಕರಿಗೆ ಮಾಹಿತಿ ನೀಡಲಾಗಿದೆ’ ಎಂದು ಆರ್‌ಪಿಎಫ್‌ ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.