ADVERTISEMENT

ಬನಾರಸ್‌ ಐಐಟಿ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ಮೂವರ ಬಂಧನ

ಪಿಟಿಐ
Published 31 ಡಿಸೆಂಬರ್ 2023, 13:20 IST
Last Updated 31 ಡಿಸೆಂಬರ್ 2023, 13:20 IST
   

ವಾರಾಣಸಿ (ಉತ್ತರಪ್ರದೇಶ): ‘ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಐಐಟಿ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಲಂಕಾ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಭಾನುವಾರ ತಿಳಿಸಿದ್ದಾರೆ.

‘ಆರೋಪಿಗಳನ್ನು ಕುನಾ‍ಲ್‌ ಪಾಂಡೆ, ಆನಂದ್‌ ಅಲಿಯಾಸ್‌ ಅಭಿಷೇಕ್‌ ಚೌಹಾನ್‌ ಹಾಗೂ ಸಕ್ಷಮ್‌ ಪಟೇಲ್‌ ಎಂದು ಗುರುತಿಸಲಾಗಿದೆ’ ಎಂದಿದ್ದಾರೆ.

ನವೆಂಬರ್‌ 1ರಂದು ಅತ್ಯಾಚಾರ ನಡೆದಿತ್ತು ಎಂದು ಹೇಳಲಾಗಿದೆ. ‘ತಮ್ಮ ಸ್ನೇಹಿತರೊಬ್ಬರೊಂದಿಗೆ ಹಾಸ್ಟೆಲ್‌ನಿಂದ ಆಚೆ ಹೋಗಿದ್ದಾಗ ಬೈಕ್‌ನಲ್ಲಿ ಮೂವರು ಆರೋಪಿಗಳು ಅವರ ಬಳಿ ಬಂದಿದ್ದಾರೆ. ಸ್ನೇಹಿತನಿಂದ ತನ್ನನ್ನು ಬೇರ್ಪಡಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಿದ್ದಾರೆ. ಬಳಿಕ ತನ್ನ ಫೋಟೊ ಹಾಗೂ ವಿಡಿಯೊ ತೆಗೆದುಕೊಂಡಿದ್ದಾರೆ’ ಎಂದು ವಿದ್ಯಾರ್ಥಿನಿ ನೀಡಿದ್ದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ADVERTISEMENT

‘ವಿದ್ಯಾರ್ಥಿನಿಯ ದೂರನ್ನು ಆಧರಿಸಿ ಐಪಿಸಿ ಸೆಕ್ಷನ್‌ 354ರ (ಮಾನಭಂಗ ಉದ್ದೇಶದಿಂದ ಮಹಿಳೆ ಮೇಲೆ ಬಲಪ್ರಯೋಗಿಸುವುದು) ಅಡಿಯಲ್ಲಿ ಲಂಕಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ, ಸಾಮೂಹಿಕ ಅತ್ಯಾಚಾರದ ಸೆಕ್ಷನ್‌ ಅನ್ನೂ ಪ್ರಕರಣದಲ್ಲಿ ಸೇರಿಸಲಾಗಿತ್ತು’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.